ಮಹಿಳೆಗೆ ಇಪ್ಪತ್ತೊಂದು ಲಕ್ಷ ರೂ. ವಂಚನೆ: ಇಬ್ಬರ ಬಂಧನ

ಉಳ್ಳಾಲ, ಜೂ. 12: ಅಂತರ್ಜಾಲದ ಮೂಲಕ ಮಹಿಳೆಯೋರ್ವರ ಗೆಳೆತನ ಮಾಡಿಕೊಂಡು 21 ಲಕ್ಷ ರೂ. ಕೊಳ್ಳೆಹೊಡೆದ ಇಬ್ಬರನ್ನು ಉಳ್ಳಾಲ ಪೊಲೀಸರು ದೆಹಲಿಯಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನವದೆಹಲಿಯ ವಿಕಾಸ್‌ಪುರಿ ಬುದೆಲಾದಲ್ಲಿ ವಾಸವಾಗಿರುವ ಮಿಜೋರಾಂ ರಾಜ್ಯದ ಐಝಾವಾಲ್ ಜಿಲ್ಲೆಯ ವೆಂಗಾಲಿ ಟೌನ್ ನಿವಾಸಿ ಲಾಲ್‌ತಾನ್ ಮಾವಿಯಾ(34) ಮತ್ತು ಮಣಿಪುರ ರಾಜ್ಯದ ಚುರಚಾಂದ್‌ಪುರ್ ಟೆಡಿಮ್ ವೆಂಗ್, ನ್ಯೂಲಮ್‌ಕ ನಿವಾಸಿ ಕೂಫ್ ಬೊಯಿ ಅಲಿಯಾಸ್ ಲಿಯಾನ್ ಕೂಪ್ (32) ಬಂಧಿತ ಆರೋಪಿಗಳಾಗಿದ್ದಾರೆ.
ಕೋಟೆಕಾರು ಪಟ್ಟಣದ ನಡಾರ್ ನಿವಾಸಿ ವೈಲೆಟ್ ಡಿಸೋಜಾ ಎಂಬವರೇ ಮೋಸ ಹೋದ ಮಹಿಳೆಯಾಗಿದ್ದಾರೆ.
ಈ ಹಿಂದೆ ಇಸ್ರೇಲ್‌ನಲ್ಲಿ ಕೆಲಸಕ್ಕಿದ್ದ ವೈಲೆಟ್ ಇದೀಗ ಊರಿಗೆ ಬಂದು ನೆಲೆಸಿದ್ದಾರೆ. ವೈಲೆಟ್ ಅವರ ಸ್ನೇಹಿತೆ ಯೋರ್ವರು ಲಂಡನ್‌ನಲ್ಲಿ ನೆಲೆಸಿದ್ದು ಆಕೆಯ ಭಾವಚಿತ್ರವನ್ನು ಅಂತರ್ಜಾಲದ ಮುಖೇನ ಆರೋಪಿಗಳು ಗಳಿಸಿದ್ದು ಆಕೆಯ ಭಾವಚಿತ್ರವನ್ನೇ ಹಾಕಿ ವಾಟ್ಸಪ್ ಖಾತೆಯೊಂದನ್ನು ಸೃಷ್ಟಿಸಿ ವೈಲೆಟ್ ರನ್ನು ಸಂಪರ್ಕಿಸಿ ಮಹಿಳೆಯಿಂದಲೇ ಮಾತನಾಡಿಸಿ ಸ್ನೇಹಿತೆ ಎಂದೇ ನಂಬಿಸಿದ್ದಾರೆ.
ವಾಟ್ಸಪ್ ಮತ್ತು ನಕಲಿ ವೆಬ್‌ಸೈಟ್ ಮೂಲಕ ಸಂಪರ್ಕದಲ್ಲಿದ್ದ ಆರೋಪಿಗಳು ವೈಲೆಟ್ ಅವರಲ್ಲಿ ಸ್ನೇಹಿತೆಯ ಸ್ವರದಲ್ಲೇ ಮಾತನಾಡಿ ತಾನು ಭಾರತಕ್ಕೆ ದೊಡ್ಡ ಮೊತ್ತದ ವಿದೇಶಿ ಕರೆನ್ಸಿ ಮತ್ತು ಅಮೂಲ್ಯ ಗಿಫ್ಟ್ ಕಳುಹಿಸಿ ಕೊಟ್ಟಿದ್ದು ಅದನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿದ್ದು ಅದರ ಪ್ರೊಸೀಜರ್ ಚಾರ್ಜ್ ಸಂದಾಯ ಮಾಡಿ ಕರೆನ್ಸಿ ಮತ್ತು ಗಿಫ್ಟನ್ನು ಸದ್ಯಕ್ಕೆ ತಮ್ಮಲ್ಲೇ ಇರಿಸುವಂತೆ ಹೇಳಿದ್ದಾರೆ. ಇದನ್ನು ನಂಬಿದ ವೈಲೆಟ್ ಹಂತ ಹಂತವಾಗಿ ಆರೋಪಿಗಳ ರಾಯಲ್ ಬ್ಯಾಂಕ್ ಸ್ಕ್ವಾಟ್ ಲ್ಯಾಂಡ್ ನವದೆಹಲಿಯ ಖಾತೆಗೆ 21,58,200 ರೂ. ವರ್ಗಾಯಿಸಿದ್ದು ತದ ನಂತರ ಆರೋಪಿಗಳು ಸಂಪರ್ಕಕ್ಕೆ ಸಿಗದಿದ್ದಾಗ ತಾನು ಮೋಸ ಹೋಗಿರುವುದು ತಿಳಿದು ಕಳೆದ ಮೇ 31ರಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಉಳ್ಳಾಲ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ, ಶಾಂತರಾಜು, ಎಸಿಸಿ ಶೃತಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ರಾಜೇಂದ್ರ, ಎಎಸ್‌ಐ ವಿಜಯರಾಜ್, ಸಹಕಾರದೊಂದಿಗೆ ನವದೆಹಲಿಯ ವಿಕಾಸ್‌ಪುರಿಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.







