ಮಲಿಕ್‌ಗೆ ಸಾನಿಯಾ ಶುಭಾಶಯ

ಲಂಡನ್,ಜೂ.12: ಶ್ರೀಲಂಕಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಸೋಮವಾರ ಆಲ್‌ರೌಂಡರ್ ಶುಐಬ್ ಮಲಿಕ್ ಪಾಕಿಸ್ತಾನದ ಪರ 250ನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದು, ಮಲಿಕ್‌ರ ಪತ್ನಿ ಹಾಗೂ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಝಾ ತನ್ನ ಪತಿಗೆ ಶುಭಾಶಯ ಕೋರಿದ್ದಾರೆ.
ಕ್ರಿಕೆಟ್ ಬಗ್ಗೆ ಪತಿಯ ಬದ್ಧತೆಯನ್ನು ಶ್ಲಾಘಿಸಿದ ಸಾನಿಯಾ, 250ನೆ ಏಕದಿನ ಪಂದ್ಯವನ್ನಾಡಿ ಹೊಸ ಮೈಲುಗಲ್ಲು ತಲುಪಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.
‘‘ಇದು ಪಾಕಿಸ್ತಾನ ಹಾಗೂ ಕ್ರಿಕೆಟಿನ ಬಗ್ಗೆ ಅವರಿಗಿರುವ ಬದ್ಧತೆ ತೋರಿಸುತ್ತದೆ. ಅವರು ತನ್ನ ದೇಶವನ್ನು ಪ್ರತಿನಿಧಿಸುವ ಕುರಿತಂತೆ ತುಂಬಾ ಅಭಿಮಾನ ಹೊಂದಿದ್ದಾರೆ. ಇದೊಂದು ಅತ್ಯಂತ ಹೆಮ್ಮೆಯ ಕ್ಷಣ. ಅವರು ಈತನಕ ಮಾಡಿರುವ ಸಾಧನೆಯ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ಅವರಿಗೆ ನನ್ನ ಶುಭ ಹಾರೈಕೆ’’ ಎಂದು ಫೇಸ್‌ಬುಕ್ ವಿಡಿಯೊದಲ್ಲಿ ಸಾನಿಯಾ ಸಂದೇಶ ಕಳುಹಿಸಿದ್ದಾರೆ.
ಪ್ಯಾರಿಸ್‌ನಲ್ಲಿ ಫ್ರೆಂಚ್ ಓಪನ್‌ನಲ್ಲಿ ಭಾಗವಹಿಸಿರುವ ಸಾನಿಯಾ ಅಲ್ಲಿಂದ ಸೀದಾ ಲಂಡನ್‌ಗೆ ಆಗಮಿಸಿದ್ದು, ಪಾಕಿಸ್ತಾನ-ಶ್ರೀಲಂಕಾದ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ವೀಕ್ಷಿಸಿದ್ದಾರೆ. ಪ್ಯಾರಿಸ್‌ನಲ್ಲಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದ್ದ ಸಾನಿಯಾ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಏಗಾನ್ ಕ್ಲಾಸಿಕ್‌ನಲ್ಲಿ ಭಾಗವಹಿಸಲಿದ್ದಾರೆ. ಈ ಟೂರ್ನಿಯು ವರ್ಷದ ಮೂರನೆ ಗ್ರಾನ್‌ಸ್ಲಾಮ್ ಟೂರ್ನಿ ವಿಂಬಲ್ಡನ್‌ಗೆ ಪೂರ್ವತಯಾರಿ ಎನಿಸಿಕೊಂಡಿದೆ.







