ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಬಗ್ಗೆ ಸಂಶಯವಿತ್ತು: ನಡಾಲ್

ಪ್ಯಾರಿಸ್, ಜೂ.12: ‘‘ಸತತವಾಗಿ ಕಾಡುತ್ತಿದ್ದ ಗಾಯದ ಸಮಸ್ಯೆ ಹಾಗೂ ಕಳಪೆ ಫಾರ್ಮ್‌ನಿಂದಾಗಿ ಮೂರು ವರ್ಷಗಳ ಕಾಲ ಪ್ರಮುಖ ಪ್ರಶಸ್ತಿಯ ಬರ ಎದುರಿಸುತ್ತಿದ್ದ ನನಗೆ ಮತ್ತೊಮ್ಮೆ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಬಗ್ಗೆ ಅನುಮಾನವಿತ್ತು. ವೃತ್ತಿಜೀವನದ ಭವಿಷ್ಯದ ಬಗ್ಗೆ ಚಿಂತಿತನಾಗಿದ್ದೆ’’ ಎಂದು ಫ್ರೆಂಚ್ ಓಪನ್‌ನ ಹೊಸ ಚಾಂಪಿಯನ್ ರಫೆಲ್ ನಡಾಲ್ ಹೇಳಿದ್ದಾರೆ.
ರವಿವಾರ ನಡೆದ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಸ್ವಿಸ್‌ನ ಸ್ಟಾನ್ ವಾವ್ರಿಂಕರನ್ನು 6-2, 6-3, 6-1 ನೇರ ಸೆಟ್‌ಗಳಿಂದ ಮಣಿಸಿದ್ದ ನಡಾಲ್ ಪ್ಯಾರಿಸ್‌ನಲ್ಲಿ 10ನೆ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿ ಹೊಸ ದಾಖಲೆ ನಿರ್ಮಿಸಿದ್ದರು. ನಡಾಲ್ 2014ರಲ್ಲಿ ಪ್ಯಾರಿಸ್‌ನಲ್ಲಿ ಕೊನೆಯ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ್ದರು. ಆ ನಂತರ ಪ್ರಶಸ್ತಿಯ ಬರ ಎದುರಿಸಿದ್ದರು.
‘‘ನನಗೆ ಪ್ರತಿದಿನವೂ ಸಂಶಯವಿತ್ತು. ಆದರೆ, ಇದು ನನಗೆ ಮತ್ತಷ್ಟು ಕಠಿಣ ಶ್ರಮಪಡಲು ಪ್ರೇರಣೆಯಾಯಿತು. ನನಗೆ ಈಗಲೂ ಸಂಶಯವಿದೆ. ಕಳೆದ ಮೂರು ವರ್ಷಗಳಿಂದ ಇದು ಇತ್ತು. ಇನ್ನು ಕೆಲವು ದಿನಗಳ ಕಾಲ ಸಂಶಯ ಮುಂದುವರಿಯಲಿದೆ. ಜೀವನದಲ್ಲಿ ಯಾವುದೂ ಸ್ಪಷ್ಟವಾಗಿರುವುದಿಲ್ಲ. ನಮಗೆ ಸಂಶಯವೇ ಬಾರದೇ ಇದ್ದರೆ ಅಹಂಕಾರ ಬರುತ್ತದೆ. ನಾನು ಅಹಂಕಾರಿ ವ್ಯಕ್ತಿಯಲ್ಲ’’ ಎಂದು ನಡಾಲ್ ನುಡಿದರು.





