ಪುತ್ತೂರು: ಕುಸಿದು ಬೀಳುವ ಹಂತದಲ್ಲಿದೆ ಹಳೇಕಾಲದ ಕಿರು ಸೇತುವೆ

ಪುತ್ತೂರು, ಜೂ.12: ಪುತ್ತೂರಿನಿಂದ ಗಡಿ ಪ್ರದೇಶವಾಗಿರುವ ಪಾಣಾಜೆಗೆ ಕುಂಜೂರು ಪಂಜದ ಮೂಲಕ ಸಂಪರ್ಕ ಕಲ್ಪಿಸುವ ಸುಮಾರು 100 ವರ್ಷಗಳ ಇತಿಹಾಸವಿರುವ ಚೆಲ್ಯಡ್ಕ ಮುಳುಗು ಸೇತುವೆ ಇದೀಗ ಅಪಾಯದ ಸ್ಥಿತಿಗೆ ತಲುಪಿದೆ.
ತೀರಾ ಹಳೆಯದಾದ ಮತ್ತು ಪ್ರತೀ ವರ್ಷವೂ ಮಳೆಗಾಲದಲ್ಲಿ ಮುಳುಗಡೆಯಾಗುವ ಮೂಲಕ ಈ ಭಾಗದ ಜನತೆಗೆ ಸಮಸ್ಯೆಯಾಗಿ ಕಾಡುವ ಈ ಮುಳುಗು ಸೇತುವೆಗೆ ಮುಕ್ತಿ ನೀಡುವಂತೆ ಆ ಭಾಗದ ಜನತೆ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಾ, ಜನಪ್ರತಿನಿಧಿಗಳ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುತ್ತಾ ಬಂದಿದ್ದರೂ ಈ ತನಕವೂ ಪ್ರತಿಫಲ ಶೂನ್ಯವಾಗಿದ್ದು, ಇದೀಗ ಸೇತುವೆಯ ಅಡಿಪಾಯ ಕಲ್ಲುಗಳು ಜರಿಯ ತೊಡಗಿದ್ದು, ಸೇತುವೆಯೇ ಕುಸಿದು ಬೀಳುವ ಹಂತಕ್ಕೆ ತಲುಪಿದೆ.
ಪುತ್ತೂರಿನಿಂದ ಪರ್ಲಡ್ಕ, ಕುಂಜೂರುಪಂಜ, ಒಳತ್ತಡ್ಕ, ದೇವಸ್ಯ ಅಜ್ಜಿಕಲ್ಲು ಮೂಲಕವಾಗಿ ಪಾಣಾಜೆ, ಸುಳ್ಯಪದವು ಕಡೆಗಳಿಗೆ ಹಾಗೂ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಪುತ್ತೂರು-ಪಾಣಾಜೆ ರಸ್ತೆಯ ಚೆಲ್ಯಡ್ಕ ಎಂಬಲ್ಲಿ ತಡೆಗೋಡೆ ಇಲ್ಲದ ಈ ಮುಳುಗು ಸೇತುವೆ ಇದೆ. ಇದೀಗ ಮುಳುಗು ಸೇತುವೆಗೆ ಆಧಾರಸ್ಥಂಭವಾಗಿ ಅಳವಡಿಸಲಾಗಿರುವ ಕಗ್ಗಲ್ಲಿನಿಂದ ನಿರ್ಮಿಸಿರುವ ಫಿಲ್ಲರ್‌ಗಳ ಪೈಕಿ ಮೂರು ಪಿಲ್ಲರ್‌ಗಳ ಕಲ್ಲುಗಳು ಕಸಿಯತೊಡಗಿದ್ದು, ಆ ಪೈಕಿ ಎರಡು ಪಿಲ್ಲರ್‌ಗಳ ಕಲ್ಲುಗಳು ಹೆಚ್ಚು ಕುಸಿದಿದ್ದು, ಸೇತುವೆಯ ಎರಡೂ ಬದಿಗಳಲ್ಲಿ ಬಿರುಕುಬಿಟ್ಟಿದೆ. ಇದರಲ್ಲಿ ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಸೇತುವೆ ಕುಸಿದು ಬೀಳುವ ಅಪಾಯ ಎದುರಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆಗೆ ಸುಮಾರು 100 ವರ್ಷಗಳ ಇತಿಹಾಸವಿದ್ದು, ತಡೆಗೋಡೆ ಇಲ್ಲದಿರುವ ಈ ಸೇತುವೆಯು ಹೊಳೆಯಿಂದ ಸುಮಾರು 8 ಅಡಿಯಷ್ಟು ಎತ್ತರದಲ್ಲಿದೆ. ಆದರೆ ಇದೀಗ ಹೊಳೆಯಲ್ಲಿ ಹೂಳು ತುಂಬಿಕೊಂಡಿರುವ ಪರಿಣಾಮವಾಗಿ 4 ಅಡಿಗಳಷ್ಟು ಮಾತ್ರವಿದ್ದು, ಸದಾರಣ ಮಳೆಯ ನೀರೂ ಸರಾಗವಾಗಿ ಹರಿದು ಹೋಗುವುದು ಅಸಾಧ್ಯವಾಗಿದೆ. ಪ್ರತೀ ಷರ್ಷ ಮಳೆಗಾಲದಲ್ಲಿ ಹಲವಾರು ಬಾರಿ ಮುಳುವಡೆಯಾಗುವ ಮೂಲಕ ಈ ಭಾಗದ ಜನತೆಯ ಸಂಪರ್ಕ ವ್ಯವಸ್ಥೆಗೆ ಸಮಸ್ಯೆಯಾಗಿ ಕಾಡುತ್ತಿರುವ ಈ ಸೇತುವೆಯ ಅಡಿಪಾಯ ಕಲ್ಲುಗಳು ಕುಸಿಯಲಾರಂಭಿಸಿರುವುದರಿಂದ ಇದೀಗ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿದೆ. ಸೇತುವೆ ಕುಸಿದಲ್ಲಿ ಕುಂಜೂರುಪಂಜದ ಮೂಲಕ ಈ ರಸ್ತೆಯಾಗಿ ಬೆಟ್ಟಂಪಾಡಿ ,ಪಾಣಾಜೆ, ಸುಳ್ಯಪದವು ಕಡೆಗೆ ತೆರಳುವ ಪ್ರಯಾಣಿಕರು ಪುತ್ತೂರು ಪೇಟೆಯಿಂದ ಸಂಟ್ಯಾರು ಮಾರ್ಗವಾಗಿ ಸುತ್ತು ಬಳಸಿ ತೆರಳಬೇಕಾಗಿದೆ.
ಎರಡೂ ಬದಿಗಳಲ್ಲಿ ಬಿರುಕುಬಿಟ್ಟಿರುವ, ಆಧಾರ ಗೋಡೆಯ ಕಲ್ಲಗಳು ಕುಸಿದು ಬೀಳತೊಡಗಿರುವ ಈ ಸೇತುವೆಯಲ್ಲಿ ಮಳೆಗಾಲದಲ್ಲಿ ಘನವಾಹನಗಳು ಸಂಚರಿಸುವುದು ಸೂಕ್ತವಲ್ಲ. ಈ ಬಾರಿಯ ಮಳೆಗಾಲದಲ್ಲಿ ಬಾರೀ ಮಳೆಯಾದಲ್ಲಿ ಹೊಳೆಯಲ್ಲಿ ದೊಡ್ಡ ಪ್ರಮಾಣದ ಮಳೆನೀರು ಹರಿದುಕೊಂಡು ಬಂದು ಸೇತುವೆಯ ಇನ್ನಷ್ಟು ಪಿಲ್ಲರ್ ಕಲ್ಲುಗಳು ಜರಿದು ಹೋಗುವ ಸಾಧ್ಯತೆ ಇರುವುದರಿಂದ ಇಲ್ಲಿ ಘನವಾಹನಗಳು ಸಂಚರಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.
ಚೆಲ್ಯಡ್ಕ ಸೇತುವೆಯ ಪುನರ್ ನಿರ್ಮಾಣ ಮಾಡಬೇಕಾಗಿದೆ. ಇದಕ್ಕೆ ಹೆಚ್ಚಿನ ಮೊತ್ತದ ಅನುದಾನ ಬೇಕಾಗುವ ಕಾರಣ ರೂ. 1.25 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಈ ಮಳೆಗಾಲ ಕಳೆದ ಮುಂದಿನ ವರ್ಷದ ಮಳೆಗಾಲದ ವೇಳೆಗಾದರೂ ಖಂಡಿತವಾಗಿಯೂ ಚೆಲ್ಯಡ್ಕದ ಮುಳುಗು ಸೇತುವೆಗೆ ಮುಕ್ತಿ ಸಿಗಲಿದೆ
- ಶಕುಂತಳಾ ಶೆಟ್ಟಿ. ಶಾಸಕರು
ಇಲ್ಲಿನ ರಸ್ತೆಯೂ ದೇವಸ್ಯದಿಂದ ಚೆಲ್ಯಡ್ಕತನಕ ತೀರಾ ಹದೆಗೆಟ್ಟಿದೆ. ಅಲ್ಲದೆ ಇದೀಗ ಸೇತುವೆಯೂ ಬಿರುಕು ಬಿಟ್ಟು ಅಪಾಯದ ಸ್ಥಿತಿಯಲ್ಲಿದೆ. ಸೇತುವೆ ದುರಸ್ತಿಗೊಳಿಸುವಂತೆ ಹಲವಾರು ಬಾರಿ ಸ್ಥಳೀಯರು ಮನವಿಯನ್ನು ಸಲ್ಲಿಸಿದ್ದರೂ ಯಾವುದೇ ಉಪಯೋಗವಾಗಿಲ್ಲ. ಸೇತುವೆ ಸಂಪೂರ್ಣ ಕುಸಿದು ಬೀಳುವ ಮೊದಲು ಸಂಬಂಧಪಟ್ಟವನ್ನು ಕ್ರಮ ಕೈಗೊಳ್ಳಬೇಕು.
ಪುರಂದರ ರೈ, ಕೈಕಾರ