ಕೇಂದ್ರ ಸರಕಾರದಿಂದ ಆದಿವಾಸಿಗಳ ದಮನ: ಕೆ.ಪ್ರಕಾಶ್ ಆರೋಪ

ಮಡಿಕೇರಿ, ಜೂ.13: ಆದಿವಾಸಿಗಳ ಅಭ್ಯುದಯಕ್ಕಾಗಿ ಜಾರಿಯಲ್ಲಿದ್ದ 307 ಯೋಜನೆಗಳಲ್ಲಿ 46 ಯೋಜನೆಗಳನ್ನು ಕಡಿತಗೊಳಿಸಿ ಕೇವಲ 261 ಯೋಜನೆಗಳನ್ನು ಸೀಮಿತಗೊಳಿಸಿರುವ ಕೇಂದ್ರ ಸರಕಾರ ವಾರ್ಷಿಕ ಅನುದಾನವನ್ನು ಕೂಡ ಕಡಿತಗೊಳಿಸುವ ಮೂಲಕ ಆದಿವಾಸಿಗಳ ದಮನಕ್ಕೆ ಮುಂದಾಗಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಪ್ರಮುಖ ಹಾಗೂ ಪ್ರಬಂಧಕಾರ ಕೆ.ಪ್ರಕಾಶ್ ಆರೋಪಿಸಿದ್ದಾರೆ.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ವತಿಯಿಂದ ನಗರದ ಸರಕಾರಿ ನೌಕರರ ಸಭಾಂಗಣದಲ್ಲಿ ಆದಿವಾಸಿ ಸಮುದಾಯಗಳ ಬದುಕು, ಬವಣೆ, ಭಾಷೆ ಮತ್ತು ಸಂಸ್ಕೃತಿಯ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ.ಪ್ರಕಾಶ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನೈಸರ್ಗಿಕ ಸಂಪನ್ಮೂಲಗಳ ಕಾವಲುಗಾರರಾದ ಆದಿವಾಸಿಗಳನ್ನು ಒಕ್ಕಲೆಬ್ಬಿಸಿ ಬಂಡವಾಳಶಾಹಿಗಳಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಆದಿವಾಸಿ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಕೇಂದ್ರದ ಬಜೆಟ್‌ನಲ್ಲಿ ಶೇ.8.2 ನ್ನು ಆದಿವಾಸಿಗಳ ಅಭಿವೃದ್ಧಿಗೆ ಮೀಸಲಿಡಬೇಕೆಂದು ನಿಯಮವಿದೆ. ಆದರೆ, ಕೇಂದ್ರ ಈ ಪ್ರಮಾಣವನ್ನು 2.75ಕ್ಕೆ ಇಳಿಕೆ ಮಾಡಿದೆ ಎಂದು ಟೀಕಿಸಿದರು. ಸ್ವಾತಂತ್ರ್ಯ ಹೋರಾಟದ ಸಂದರ್ಭ ಆದಿವಾಸಿ ವಿರೋಧಿ ನೀತಿ ಅನುಸರಿಸುತ್ತಿದ್ದ ಬ್ರಿಟೀಷರ ವಿರುದ್ಧ ಆದಿವಾಸಿಗಳು ಹೋರಾಟ ನಡೆಸಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಆದಿವಾಸಿಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದ್ದರಿಂದ ಆದಿವಾಸಿಗಳಿಗೆ ಕೂಡ ಈ ದೇಶದ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡುವುದರೊಂದಿಗೆ ಎಲ್ಲಾ ಹಕ್ಕುಗಳನ್ನು ದೊರಕಿಸಿಕೊಡುವ ಅಗತ್ಯವಿದೆ ಎಂದರು.
ಆದಿವಾಸಿಗಳಿಗೆ ಮಾನವ ಆಕಾರದ ದೇವರುಗಳಿಲ್ಲ. ಆದಿವಾಸಿಗಳದ್ದು ಪ್ರತ್ಯೇಕ ಸಂಸ್ಕೃತಿ ಮತ್ತು ಧರ್ಮವಾಗಿದೆ. ಆದರೆ, ಸಂಘ ಪರಿವಾರ ಆದಿವಾಸಿಗಳು ಪೂಜಿಸುವ ಮೂಲ ಸ್ಥಾನದಲ್ಲಿ ದೇವಾಲಯವನ್ನು ಕಟ್ಟಿ ಪೂಜಾರಿಗಳನ್ನು ನೇಮಿಸುವ ಮೂಲಕ ಆದಿವಾಸಿಗಳ ಮೂಲ ಆಚರಣೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆದಿವಾಸಿ ಮುಖಂಡ ಹಾಗೂ ಸಮಿತಿಯ ಜಿಲ್ಲಾ ಸಂಚಾಲಕ ವೈ.ಕೆ.ಗಣೇಶ್ ಮಾತನಾಡಿ, ಜಿಲ್ಲೆಯಲ್ಲಿ ನಿವೇಶನ ರಹಿತ ಆದಿವಾಸಿಗಳ ಸಂಖ್ಯೆ ಹೆಚ್ಚಾಗಿದ್ದು, ಜೀತ ಪದ್ಧತಿ ಇನ್ನೂ ಜೀವಂತವಾಗಿದೆ ಎಂದರು. ಕೆಲವು ಕುಟುಂಬಗಳಿಗಷ್ಟೆ ಹಕ್ಕುಪತ್ರವನ್ನು ನೀಡಿ ರಾಜಕಾರಣಿಗಳು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅನೇಕ ಆದಿವಾಸಿ ಕುಟುಂಬಗಳ ಭೂಮಿ ಹಾಗೂ ಸ್ಮಶಾನ ಒತ್ತುವರಿಯಾಗಿದೆ. ಬಲಾಢ್ಯರು ಆದಿವಾಸಿಗಳನ್ನು ಬೆದರಿಸಿ ಓಡಿಸುವ ದೌರ್ಜನ್ಯಗಳು ನಡೆಯುತ್ತಿದೆ ಎಂದು ಆರೋಪಿಸಿದರು.
ಸಮಿತಿಯ ರಾಜ್ಯ ಸಂಚಾಲಕಿ ಪ್ರೇಮ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿರಿಜನ ಮುಖಂಡರಾದ ದಕ್ಷಿಣ ಕನ್ನಡ ಜಿಲ್ಲೆಯ ಕೃಷ್ಣಪ್ಪ, ಹುಣಸೂರಿನ ಜೆ.ಕೆ.ತಿಮ್ಮ, ಮಲೆಕುಡಿಯ ವಿಠಲ ಸೇರಿದಂತೆ ರಾಜ್ಯದ ವಿವಿಧೆಡೆಯ ಆದಿವಾಸಿ ಮುಖಂಡರು ಉಪಸ್ಥಿತರಿದ್ದರು.







