2ನೇ ದಿನವೂ ಮುಂದುವರೆದ ಹೊರಗುತ್ತಿಗೆ ಪೌರ ಕಾರ್ಮಿಕರ ಅನಿರ್ಧಿಷ್ಟವಧಿ ಧರಣಿ ಆಗ್ರಹಿಸಿ

ಹಾಸನ, ಜೂ.13: ಹೊರಗುತ್ತಿಗೆ ಪೌರ ಕಾರ್ಮಿಕರ ಕೆಲಸವನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ತಮ್ಮ ಕೆಲಸ ಸ್ಥಗಿತಗೊಳಿಸುವುದರ ಮೂಲಕ ಜಿಲ್ಲಾಧಿಕಾರಿ ಕಛೇರಿ ಮುಂದೆ ಎರಡನೇ ದಿನವೂ ತಮ್ಮ ಧರಣಿ ಮುಂದುವರೆಸಿದರು.
ರಾಜ್ಯದ ಮುನಿಸಿಪಾಲಿಟಿಗಳಲ್ಲಿ ಗುತ್ತಿಗೆ ಕಾರ್ಮಿಕ ಪದ್ದತಿಯನ್ನು ರದ್ದುಪಡಿಸಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರನ್ನು ಖಾಯಂ ಮಾಡುವಂತೆ ಹಾಗೂ ಕಾರ್ಮಿಕರಿಗೆ ಮುನಿಸಿಪಾಲಿಟಿಗಳೇ ನೇರವಾಗಿ ವೇತನ ಪಾವತಿಸುವಂತೆ ಒತ್ತಾಯಿಸಿದರು.
ಕರ್ನಾಟಕ ಸರಕಾರವು ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಾದ ಮಹಾ ನಗರಪಾಲಿಕೆ, ನಗರಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಗಳಲ್ಲಿ ನಗರ ನೈರ್ಮಲ್ಯ, ಕುಡಿಯುವ ನೀರು ನಿರ್ವಹಣೆ ಸೇರಿದಂತೆ ಬಹುತೇಕ ನಾಗರೀಕ ಸೇವೆಗಳನ್ನು ಹೊರ ಗುತ್ತಿಗೆ ನೀಡಲಾಗುತ್ತಿದೆ. ಹೊರ ಗುತ್ತಿಗೆ ಪಡೆದ ಗುತ್ತಿಗೆದಾರರು ಕಾರ್ಮಿಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ಅವರಿಗೆ ಕಾನೂನು ಬದ್ಧವಾದ ವೇತನ ಹಾಗೂ ಇನ್ನಿತರೆ ಸೇವಾ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿದ್ದಾರೆ ಎಂದು ದೂರಿದರು.
ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂ ಮಾಡುವ ಬದಲಿಗೆ ಮುನಿಸಿಪಾಲಿಟಿಗಳಲ್ಲಿ ಗುತ್ತಿಗೆ ಕಾರ್ಮಿಕ ಪದ್ದತಿಯನ್ನೇ ಖಾಯಂ ಆಗಿ ಮುಂದುವರಿಸುವ ರೀತಿಯಲ್ಲಿ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ ಹಾಗೂ ರಾಜ್ಯದ ಪೌರಕಾರ್ಮಿಕರ ಸಂಘಟನೆಗಳ ಜಂಟಿ ಹೋರಾಟ ಸಮಿತಿ ಹಾಗೂ ದಲಿತ ಸಂಘಟನೆಗಳ ನೇತೃತ್ವದಲ್ಲಿ ಧರಣಿ ಮಾಡಿರುವುದಾಗಿ ಹೇಳಿದರು.
ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿಯೂ ಸಹ ಗುತ್ತಿಗೆ ಪೌರಕಾರ್ಮಿಕರು ತಮ್ಮ ಕೆಲಸ ಸ್ಥಗಿತಗೊಳಿಸಿ, ಗುತ್ತಿಗೆ ಪೌರಕಾರ್ಮಿಕರ ಕೆಲಸದ ಖಾಯಂ ಮಾಡುವಂತೆ, ಕಾರ್ಮಿಕ ಕಾನೂನುಗಳ ಸಮರ್ಪಕ ಜಾರಿಗಾಗಿ ಹಾಗೂ ಕಾರ್ಮಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ದಬ್ಬಾಳಿಕೆಗಳನ್ನು ತಡೆಗಟ್ಟುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧರಣಿ ನಡೆಸಿ ಮನವಿ ಸಲ್ಲಿಸಿದರು.
ಸಿಐಟಿಯು ಖಜಾಂಚಿ, ಮಂಜುನಾಥ್, ರಾಜ್ಯ ಸಮಿತಿ ಸದಸ್ಯೆ ಅನುರಾಧ, ಅರವಿಂದ್ ಇತರರು ಪಾಲ್ಗೊಂಡಿದ್ದರು.







