ಶಿವಮೊಗ್ಗ: ತುಂಗಾ ಡ್ಯಾಂ ಭರ್ತಿಯ ಹಂತಕ್ಕೆ!: ಮಲೆನಾಡಿನಲ್ಲಿ ತಗ್ಗಿದ ಮಳೆಯ ಆರ್ಭಟ

ಶಿವಮೊಗ್ಗ, ಜೂ.13: ಮಲೆನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಚುರುಕುಗೊಂಡಿದ್ದ ಮುಂಗಾರು ಮಳೆಯ ಆರ್ಭಟದಲ್ಲಿ ಮಂಗಳವಾರ ಕೊಂಚ ಇಳಿಕೆ ಕಂಡುಬಂದಿದೆ. ಈ ನಡುವೆ ಮೊದಲ ಮಳೆಗೆ ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿರುವ ತುಂಗಾ ಜಲಾಶಯ ಭರ್ತಿಯ ಹಂತಕ್ಕೆ ತಲುಪಿದೆ.
ಡ್ಯಾಂನಿಂದ ಯಾವ ಕ್ಷಣದಲ್ಲಿ ಬೇಕಾದರೂ ನೀರು ಹೊರ ಬಿಡುವ ಸಾಧ್ಯತೆಯಿದೆ. ಮಂಗಳವಾರ ಬೆಳಿಗ್ಗೆಯ ಮಾಹಿತಿಯಂತೆ ತುಂಗಾ ಜಲಾಶಯದ ನೀರಿನ ಮಟ್ಟ 587.27 (ಗರಿಷ್ಠ ಮಟ್ಟ : 588.24) ಅಡಿಯಿದೆ. ಡ್ಯಾಂ ಭರ್ತಿಗೆ ಕೇವಲ 1 ಅಡಿಯಷ್ಟು ನೀರು ಬೇಕಾಗಿದೆ. 7020 ಕ್ಯೂಸೆಕ್ ಒಳಹರಿವಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 584.95 ಅಡಿಯಿತ್ತು. ತುಂಗಾ ಡ್ಯಾಂ ಕಡಿಮೆ ನೀರು ಸಂಗ್ರಹಣೆಯ ವ್ಯಾಪ್ತಿ - ವಿಸ್ತೀರ್ಣ ಹೊಂದಿದ್ದು, ಕೇವಲ 3.24 ಟಿಎಂಸಿ ನೀರು ಸಂಗ್ರಹಣೆಯ ಸಾಮರ್ಥ್ಯ ಹೊಂದಿದೆ.
ಪ್ರತಿ ವರ್ಷ ಮುಂಗಾರು ಮಳೆಯ ಮೊದಲ ಮಳೆಗೆ ಡ್ಯಾಂ ಗರಿಷ್ಠ ಮಟ್ಟ ತಲುಪುತ್ತದೆ. ಕಳೆದ ಕೆಲ ದಿನಗಳಿಂದ ಜಲಾನಯನ ಪ್ರದೇಶವಾದ ತೀರ್ಥಹಳ್ಳಿ, ಶೃಂಗೇರಿ ಸುತ್ತಮುತ್ತಲು ಉತ್ತಮ ಮಳೆಯಾಗುತ್ತಿರುವ ಕಾರಣದಿಂದ ಡ್ಯಾಂಗೆ ಉತ್ತಮ ಒಳಹರಿವು ಕಂಡುಬಂದಿತ್ತು. ಉಳಿದಂತೆ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ 1745.85 (ಗರಿಷ್ಠ ಮಟ್ಟ : 1818) ಅಡಿಯಿದೆ. 11,432 ಕ್ಯೂಸೆಕ್ ಒಳಹರಿವಿದೆ. ಹೊರ ಹರಿವು ಸ್ಥಗಿತಗೊಳಿಸಲಾಗಿದೆ.
ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 1756.15 ಅಡಿಯಿತ್ತು. ಶಿವಮೊಗ್ಗ - ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿಯೆಂದೇ ಕರೆಯಲಾಗುವ ಭದ್ರಾ ಜಲಾಶಯದ ನೀರಿನ ಮಟ್ಟ 103.2 (ಗರಿಷ್ಠ ಮಟ್ಟ : 186) ಅಡಿಯಿದೆ. 4035 ಕ್ಯೂಸೆಕ್ ಒಳಹರಿವಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 113.1 ಅಡಿಯಿತ್ತು.
ತಗ್ಗಿದ ಆರ್ಭಟ: ಕಳೆದ ಮೂರು ದಿನಗಳಿಂದ ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳು ಸೇರಿದಂತೆ ಹಲವೆಡೆ ಮುಂಗಾರು ಮಳೆ ಚುರುಕುಗೊಂಡಿತ್ತು. ಧಾರಾಕಾರ ಮಳೆಯಾಗುತ್ತಿತ್ತು. ಹಳ್ಳಕೊಳ್ಳಗಳು ತುಂಬಿ ಹರಿಯಲಾರಂಭಿಸಿದ್ದವು. ಆದರೆ ಮಂಗಳವಾರ ಬೆಳಿಗ್ಗೆಯಿಂದ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ ಮುಂದಿನ ದಿನಗಳಲ್ಲಿ ಧಾರಾಕಾರ ಮಳೆಯಾಗುವ ಲಕ್ಷಣಗಳು ಗೋಚರವಾಗುತ್ತಿವೆ.
ಮತ್ತೊಂದೆಡೆ ಕಳೆದ ಮೂರು ದಿನಗಳಿಂದ ಜಿಟಿಜಿಟಿ ಮಳೆಗೆ ಸಾಕ್ಷಿಯಾಗಿದ್ದ ಶಿವಮೊಗ್ಗ ನಗರದಲ್ಲಿ ಮಂಗಳವಾರ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಚುರುಕು: ಜಿಲ್ಲೆಯ ಬಹುತೇಕ ಎಲ್ಲೆಡೆ ಹದ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಮೆಕ್ಕೆಜೋಳ ಬಿತ್ತನೆ ಕಾರ್ಯವನ್ನು ರೈತರು ಆರಂಭಿಸಿದ್ದಾರೆ.







