ರಾಜ್ಯ ಸರಕಾರದ ಪ್ರಾಯೋಗಿಕ ಡಿಜಿಟಲ್ ಸರ್ವೇ : ಕಂದಾಯ ಸಚಿವರ ತವರೂರಲ್ಲಿ ಯಶಸ್ವಿ ಅನುಷ್ಠಾನ

ಶಿವಮೊಗ್ಗ, ಜೂ. 13: ತಂತ್ರಜ್ಞಾನದ ಪರಿಣಾಮಕಾರಿ ಸದ್ಬಳಕೆಯ ಮೂಲಕ ಆಧುನಿಕ, ಸುಧಾರಿತ ಉಪಕರಣದ ಮೂಲಕ ವೈಜ್ಞಾನಿಕವಾಗಿ ಭೂ ಸರ್ವೇ ನಡೆಸುವ ಉದ್ದೇಶದಿಂದ, ರಾಜ್ಯದ ಪ್ರತಿ ಜಿಲ್ಲೆಯ ತಲಾ ಎರಡು ಗ್ರಾಮಗಳಲ್ಲಿ ಇತ್ತೀಚೆಗೆ ರಾಜ್ಯ ಸಕಾರದ ಕಂದಾಯ ಇಲಾಖೆಯ ಸರ್ವೇ ವಿಭಾಗವು ’ಎಲೆಕ್ಟ್ರಾನಿಕ್ ಟೋಟಲ್ ಸ್ಟೇಷನ್’ (ಇ.ಟಿ.ಎಸ್.) ಉಪಕರಣದ ಮೂಲಕ ನಡೆಸಿದ್ದ ಸರ್ವೇಯು ಯಶಸ್ವಿಯಾಗಿದ್ದು, ಉತ್ತಮ ಫಲಿತಾಂಶ ಬಂದಿದೆ.
ಗ್ರಾಮೀಣ ಭಾಗದಲ್ಲಿ ಇ.ಟಿ.ಎಸ್. ಉಪಕರಣದ ಮೂಲಕ ನಡೆಸಿದ ಸರ್ವೇಯು, ರಾಜ್ಯದ ಸರ್ವೇ ಇಲಾಖೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಯಾಗಿದೆ. ಖಾಸಗಿ ಸಂಸ್ಥೆಯ ನೆರವಿನೊಂದಿಗೆ ಈ ಸರ್ವೇ ನಡೆಸಲಾಗಿದೆ. ಈ ಡಿಜಿಟಲ್ ಆಧಾರಿತ ಸರ್ವೇಯಡಿ ಸಂಗ್ರಹಿಸುವ ಮಾಹಿತಿಗಳು ನಿಖರತೆ, ಖಚಿತತೆ, ವಸ್ತುನಿಷ್ಠತೆಯಿಂದ ಕೂಡಿರುವುದರಿಂದ ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿಯೂ ಇ.ಟಿ.ಎಸ್. ಆಧಾರಿತ ಸರ್ವೇ ನಡೆಸುವಂತೆ ನಾಗರೀಕ ವಲಯದಿಂದ ಒತ್ತಾಯ ಕೇಳಿಬರುತ್ತಿದೆ.
ಯಶಸ್ವಿ ಅನುಷ್ಠಾನ: ಕಂದಾಯ ಸಚಿವ ಕಾಗೋಡು ತಿಮ್ಮಪ್ಪರವರ ತವರೂರು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲೂಕಿನ ನಿಧಿಗೆ ಹೋಬಳಿಯ ತಟ್ಟಿಕೆರೆ ಹಾಗೂ ಶಿಕಾರಿಪುರ ತಾಲೂಕಿನ ನಂದಿಹಳ್ಳಿ ಗ್ರಾಮವನ್ನು ಇ.ಟಿ.ಎಸ್. ಆಧಾರಿತ ಪ್ರಾಯೋಗಿಕ ಸರ್ವೇಗೆ ಆಯ್ಕೆ ಮಾಡಲಾಗಿತ್ತು.
ಕಳೆದ ಕೆಲ ತಿಂಗಳುಗಳ ಹಿಂದೆಯೇ ಈ ಎರಡು ಗ್ರಾಮಗಳಲ್ಲಿ ಸರ್ವೇ ಕಾರ್ಯವನ್ನು ಸರ್ವೇ ಇಲಾಖೆಯು ಪೂರ್ಣಗೊಳಿಸಿದೆ. ಈ ಎರಡು ಗ್ರಾಮಗಳ ಕೃಷಿ ಜಮೀನುಗಳ ಗಡಿಯನ್ನು ಇ.ಟಿ.ಎಸ್. ಉಪಕರಣದ ಮೂಲಕ ವೈಜ್ಞಾನಿಕವಾಗಿ ಗುರುತಿಸಲಾಗಿದೆ. ಸಂಬಂಧಿಸಿದ ಜಮೀನುಗಳ ಮಾಲೀಕರಿಗೆ ಡಿಜಿಟಲ್ ಆಧಾರಿತ ನಕ್ಷೆಯನ್ನು ಕೂಡ ವಿತರಿಸಲಾಗಿದೆ. ತಮ್ಮ ಜಮೀನುಗಳಿಗೆ ಸಂಬಂಧಿಸಿದ ಸರ್ವೇಯ ಸಮಗ್ರ ಮಾಹಿತಿ ದೊರಕಿರುವುದಕ್ಕೆ ಗ್ರಾಮಸ್ಥರು ಸಂತಸಗೊಂಡಿದ್ದಾರೆ. ವೈಜ್ಞಾನಿಕ ಆಧಾರಿತ ಈ ಸರ್ವೇಗೆ ಎರಡು ಗ್ರಾಮಗಳ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ವಿಸ್ತರಣೆ ಮಾಡಲಿ: ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿಯೂ ಇ.ಟಿ.ಎಸ್. ಉಪಕರಣದ ಮೂಲಕ ಜಮೀನುಗಳ ಸರ್ವೇ ನಡೆಸುವ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಕೈಗೊಳ್ಳಬೇಕು. ಜಿಲ್ಲೆಯಲ್ಲಿರುವ ಸರ್ವೇ ಇಲಾಖೆಗೆ ಕನಿಷ್ಠ ನಾಲ್ಕೈದು ಇ.ಟಿ.ಎಸ್. ಉಪಕರಣಗಳನ್ನು ಖರೀದಿಸಿ ಕೊಡಬೇಕು. ಈ ಉಪಕರಣ ಬಳಸಲು ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದು ನಾಗರೀಕರು ಆಗ್ರಹಿಸುತ್ತಾರೆ.
ಇದಕ್ಕೆ ಕೋಟ್ಯಾಂತರ ರೂ. ವೆಚ್ಚವಾದರೂ ರೈತರಿಗೆ ಸಾಕಷ್ಟು ಅನುಕೂಲಕರವಾಗಲಿದೆ. ವೈಜ್ಞಾನಿಕವಾಗಿ ಜಮೀನುಗಳ ಸರ್ವೇ ಸಾಧ್ಯವಾಗಲಿದೆ. ಇದಕ್ಕೆ ಸಂಬಂಧಿಸಿದ ವ್ಯಾಜ್ಯಗಳಿಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಬೀಳಲಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪರವರು ಸೂಕ್ತ ಗಮನಹರಿಸಲಿದ್ದಾರೆಯೇ ಎಂಬುವುದನ್ನು ಕಾದು ನೋಡಬೇಕಾಗಿದೆ.







