ಯುಎಇ: ವರ್ಷಾಂತ್ಯದಿಂದ ಕಂಪೆನಿಗಳಿಗೆ ಸಾಮಾಜಿಕ ಜವಾಬ್ದಾರಿ ಕಡ್ಡಾಯ

ದುಬೈ, ಜೂ. 13: ಯುಎಇಯ ಕಂಪೆನಿಗಳು 2017ರ ಕೊನೆಯ ವೇಳೆಗೆ ಸಾಮಾಜಿಕ ಯೋಜನೆಯ ಕಾರ್ಯಕ್ರಮಗಳಿಗೆ ನಿಧಿಗಳನ್ನು ತೆಗೆದಿಡಬೇಕು ಹಾಗೂ ಅದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ಯುಎಇಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ದಾನ ಮಾಡುವ ವರ್ಷ’ ಆಚರಣೆಗೆ ಸಿದ್ಧತೆಗಳನ್ನು ಮಾಡಿರುವ ಹಣಕಾಸು ಸಚಿವಾಲಯವು ಸೋಮವಾರ 11 ಕಾರ್ಯಕ್ರಮಗಳನ್ನು ಅನಾವರಣಗೊಳಿಸಿದೆ. ದಾನವನ್ನು ತನ್ನ ಕೇಂದ್ರೀಯ ವೌಲ್ಯವನ್ನಾಗಿ ಅಂಗೀಕರಿಸುವ ಕಂಪೆನಿಗಳನ್ನು ಸೃಷ್ಟಿಸುವುದು ಹಾಗೂ ಈ ವೌಲ್ಯಗಳನ್ನು ಕಂಪೆನಿಗಳು ಎಷ್ಟರ ಮಟ್ಟಿಗೆ ಅನುಸರಿಸುತ್ತಿವೆ ಎಂಬ ಬಗ್ಗೆ ಸರಕಾರಿ ಮಟ್ಟದಲ್ಲಿ ಅಂಕಿಅಂಶಗಳನ್ನು ಹೊಂದುವುದು ಈ ಕಾರ್ಯಕ್ರಮಗಳ ಉದ್ದೇಶವಾಗಿದೆ.
‘ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ’ಯನ್ನು ಯುಎಇಯ ಎಲ್ಲ ಕಂಪೆನಿಗಳಿಗೆ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಈಗಿನ ನೀತಿಗಳು ಮತ್ತು ಕಾನೂನುಗಳಲ್ಲಿ ಅಗತ್ಯ ಮಾರ್ಪಾಡುಗಳನ್ನು ತರಲು ಸಚಿವಾಲಯವು ವಿವಿಧ ಆರ್ಥಿಕ ಇಲಾಖೆಗಳು ಮತ್ತು ವಾಣಿಜ್ಯ ಸಂಘಟನೆಗಳೊಂದಿಗೆ ಮಾತುಕತೆಗಳನ್ನು ನಡೆಸುತ್ತಿದೆ.
‘‘2017ನ್ನು ‘ದಾನ ಮಾಡುವ ವರ್ಷ’ವನ್ನಾಗಿ ದೇಶ ಘೋಷಣೆ ಮಾಡಿದಂದಿನಿಂದ ದೇಶಾದ್ಯಂತ ಕೊಡುವ ಸಂಸ್ಕೃತಿಯನ್ನು ಹರಡುವ ಸಮಗ್ರ ವ್ಯವಸ್ಥೆಯೊಂದರ ರಚನೆಗೆ ಪೂರಕವಾದ ರಾಷ್ಟ್ರೀಯ ಪ್ರಯತ್ನಗಳು ಆರಂಭವಾಗಿವೆ’’ ಎಂದು ಯುಎಇಯ ಹಣಕಾಸು ಸಚಿವ ಸುಲ್ತಾನ್ ಬಿನ್ ಸಯೀದ್ ಅಲ್ ಮನ್ಸೂರಿ ಹೇಳಿದರು.







