ಜೇಡಿಮಣ್ಣಿನ ಬಂಡೆ ಕುಸಿದು ಮೂವರ ಮೃತ್ಯು,ಓರ್ವಳಿಗೆ ಗಾಯ

ರಾಂಚಿ,ಜೂ.13: ಜಾರ್ಖಂಡ್‌ನ ಧನಬಾದ್ ಜಿಲ್ಲೆಯಲ್ಲಿ ಭಾರತ್ ಕುಕಿಂಗ್ ಕೋಲ್ ಲಿ.ಗೆ ಸೇರಿದ ಬಸ್ತಕೋಲಾ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಜೇಡಿಮಣ್ಣಿನ ಬೃಹತ್ ಬಂಡೆಯೊಂದು ಕುಸಿದ ಪರಿಣಾಮ ಇಬ್ಬರು ಮಹಿಳೆಯರು ಮತ್ತು ಓರ್ವ ಬಾಲಕ ಸಜೀವ ಸಮಾಧಿಯಾಗಿದ್ದರೆ, ಇನ್ನೋರ್ವ ಮಹಿಳೆ ಗಾಯಗೊಂಡಿದ್ದಾಳೆ.
ರವಿವಾರ ಸಂಜೆ ಈ ಘಟನೆ ಸಂಭವಿಸಿದೆ. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಡಝನ್‌ಗೂ ಹೆಚ್ಚಿನ ಗ್ರಾಮಸ್ಥರು ಬಿಳಿಯ ಜೇಡಿಮಣ್ಣನ್ನು ಅಗೆಯುತ್ತಿದ್ದಾಗ ಮೇಲಿನಿಂದ ಭಾರೀ ಗಾತ್ರದ ಜೇಡಿ ಬಂಡೆ ಕುಸಿದು ಅವರ ಮೇಲೆಯೇ ಬಿದ್ದಿತ್ತು. ಮೂವರು ಮಹಿಳೆ ಯರು ಸೇರಿದಂತೆ ನಾಲ್ವರು ಮಣ್ಣಿನಡಿ ಸಿಲುಕಿದ್ದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಮೃತ ಮೂವರ ಶವಗಳನು ಹೊರತೆಗೆಯಲಾಗಿದ್ದು, ಗಾಯಾಳು ಮಹಿಳೆಯನ್ನು ರಕ್ಷಿಸಿ ಪಾಟಲಿಪುತ್ರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮಹಿಳೆಯರು ತಮ್ಮ ಮನೆಗಳಿಗೆ ಬಳಿಯಲೆಂದು ಬಿಳಿಯ ಜೇಡಿಮಣ್ಣನ್ನು ಸಂಗ್ರಹಿಸುತ್ತಿದ್ದರು ಎಂದು ಪೊಲಿಸರು ತಿಳಿಸಿದರು.
ಈ ಪ್ರದೇಶದಲ್ಲಿ ಜೇಡಿಮಣ್ಣು ತೆಗೆಯುವುದನ್ನು ನಿಷೇಧಿಸಲಾಗಿದೆ. ಆದರೂ ಗ್ರಾಮಸ್ಥರು ಅದನ್ನು ಉಲ್ಲಂಘಸಿ ಜೇಡಿಯನ್ನು ಅಗೆಯುತ್ತಿದ್ದರು ಎಂದು ಗಣಿ ಪ್ರದೇಶದ ಯೋಜನಾಧಿಕಾರಿ ಬಿ.ಕೆ.ಝಾ ತಿಳಿಸಿದರು.





