ಆತಂಕದಲ್ಲಿ ಪ್ರಯಾಣಿಸುವ ಪ್ರವಾಸಿಗರು: ಜಿಲ್ಲಾಳಿತದ ಅವ್ಯವಸ್ಥೆಗೆ ಹಿಡಿಶಾಪ

ಚಿಕ್ಕಮಗಳೂರು, ಜೂ.13: ದೇಶ-ವಿದೇಶದ, ರಾಜ್ಯ-ಹೊರರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಬಾಬಾಬುಡಾನ್ ಗಿರಿಯ ಸೊಬಗನ್ನು ವೀಕ್ಷಿಸಲು ಬರುತ್ತಿದ್ದಾರೆ. ಆದರೆ ಇಲ್ಲಿನ ಅವ್ಯವಸ್ಥೆ ಕಂಡು ತೀವ್ರ ಬೇಸರವನ್ನು ವ್ಯಕ್ತಪಡಿಸಿ ಮರಳುತ್ತಿದ್ದಾರೆ.
ಬಹಳ ಜನ ದೂರದ ಪ್ರವಾಸಿಗರಿಗೆ ಒಮ್ಮೆ ಮುಳ್ಳಯ್ಯನಗಿರಿ ನೋಡುವ ಹಂಬಲ ಇಲ್ಲದಿರದು. ಬಾಬಾ ಬುಡನ್ ಬೆಟ್ಟ ಸಾಲುಗಳಲ್ಲಿ ಸುತ್ತು ಹಾಕಿ, ಬೋರ್ಗರೆಯುವ ಜಲ ತೊರೆಗಳನ್ನು ಕಂಣ್ತುಂಬಿಕೊಳ್ಳುವ ತವಕದಲ್ಲಿ ಬರುವವರಿದ್ದಾರೆ.
ಆದರೆ ಇಲ್ಲಿನ ಅವ್ಯವಸ್ಥೆಗಳು, ಪರಿಸರ ನಾಶ, ಸೂಚನಾ ಫಲಕ ಸಹಿತ ಮಾರ್ಗದರ್ಶನ ಇಲ್ಲದೆ ಸಮಸ್ಯೆಗೆ ಪ್ರವಾಸಿಗರು ಸಿಲುಕಿಕೊಳ್ಳದಿದ್ದರೆ ಅದೇ ಬಹುದೊಡ್ಡ ಪುಣ್ಯ ಎನ್ನಬೇಕು.
ಗಿರಿಸಾಲುಗಳಲ್ಲಿ ಪಯಣಿಸಲು ಸರಕಾರ ಯಾವುದೇ ವಾಹನದ ವ್ಯವಸ್ಥೆಗಳನ್ನು ಕೂಡ ಈ ತನಕ ಮಾಡಿಲ್ಲ. ಚಿಕ್ಕಮಗಳೂರು ಹೊರ ವಲಯದ ಅತ್ತಿಗುಂಡಿ ಬಳಿ ನೂರಾರು ಸಂಖ್ಯೆಯಲ್ಲಿ ಗುಜರಿ ಜೀಪುಗಳ ಮೂಲಕ ಪ್ರವಾಸಿಗರು ಗಿರಿದರ್ಶನ ಮಾಡದೇ ಬೇರೆ ದಿಕ್ಕು ಇಲ್ಲಿಲ್ಲ. ಪ್ರವಾಸಿಗರನ್ನು ಸುಲಿಯುವ ಜೀಪು ಚಾಲಕರು 500ರೂ ರಿಂದ 1000ರೂ.ಗಳವರೆಗೂ ಕಸಿಯದೇ ಬಿಡುವವರಲ್ಲ. ಇಂತಹ ಜೀಪುಗಳನ್ನು ಬಿಟ್ಟು ಬೇರೆ ಭರವಸೆ ಇಲ್ಲದಿರುವ ಹಿನ್ನೆಲೆಯಲ್ಲಿ ಅದೇ ಜೀಪುಗಳನ್ನೆ ನಂಬಿಕೊಂಡು ವಿಧಿಯಿಲ್ಲದೇ ಪ್ರವಾಸಿಗರು ಹಿಡಿಶಾಪ ಹಾಕುತ್ತಲೇ ತೆರಳುತ್ತಾರೆ.
ಪ್ರವಾಸಿಗರು ತೆರಳುವ ಜೀಪುಗಳು ಯಾವುದೂ ಕೂಡ ಸರಿಯಾಗಿಲ್ಲ. ಎಲ್ಲವೂ ಯಾವುದೋ ಕಾಲದಲ್ಲಿಯೇ ಗುಜರಿ ಸೇರಬೇಕಿದ್ದರೂ ಇಲ್ಲಿ ಗಿರಿ ದರ್ಶನ ದಾರಿಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ವಾಹನವಾಗಿಬಿಟ್ಟಿದೆ. ಇದರಲ್ಲಿ ಕೂಲಿಕ್ಕೂ ಕೆಲವರು ಭಯಪಡುವವರಿದ್ದಾರೆ. ಕೆಲವು ಜೀಪುಗಳ ಚಾಲಕರು ಪ್ರವಾಸಿಗರನ್ನು ಸೆಳೆಯಲು ಹಳೆ ಜೀಪುಗಳಿಗೆ ಬಣ್ಣ ಬಳಿದು, ಟಾಪ್ ತೆಗೆದು ವೇಗವಾಗಿ ಗಿರಿಯ ಅಂಕುಡೊಂಕು ರಸ್ತೆಗಳಲ್ಲಿ ಸಾಗುವುದು ನೋಡಿದರೆ ಜೀವ ಬಾಯಿಗೆ ಬಂದಂತಾಗುತ್ತದೆ.
ಬಾಬಾಬುಡಾನ್ ಗಿರಿ ಸುತ್ತಮುತ್ತಲ ಪ್ರದೇಶಗಳಿಗೆ ತೆರಳುವ ಜೀಪುಗಳು ಮಧ್ಯಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ನಂಬರ್‌ಪ್ಲೇಟ್‌ಗಳಲ್ಲಿ ಕಾಣುತ್ತದೆ. ಇವೆಲ್ಲವೂ 25ರಿಂದ 30ವರ್ಷಗಳ ಹಿಂದಿನ ಜೀಪುಗಳು ಎಂಬುದು ನೋಡುವಾಗಲೇ ತಿಳಿಯುತ್ತದೆ. ಹಳದಿ ಮಾತ್ರವಲ್ಲದೆ ಬಿಳಿ ಬೋರ್ಡಿನ ಜೀಪುಗಳನ್ನು ಇಲ್ಲಿ ಬಳಕೆಯಾಗುತ್ತಿದೆ. ಈ ಬಗ್ಗೆ ಆರ್‌ಟಿಓ ಅಥವಾ ಪೊಲೀಸರು ಕ್ರಮ ಕೈಗೊಳ್ಳದಿರುವುದು ಅನುಮಾನ ಮೂಡಿಸಿದೆ.







