ಮೊವಾಡಿ ಚಲೋ ಸಮಾವೇಶದಲ್ಲಿ ನಿರ್ಣಯ ಮಂಡನೆ
ಕುಂದಾಪುರ, ಜೂ.13: ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತಂದಿರುವ ಜಾನುವಾರು ಮಾರಾಟಕ್ಕೆ ನಿರ್ಬಂಧ ವಿಧಿಸುವ ಕಾನೂನು ಕೃಷಿಕರ ಮತ್ತು ಹೈನುಗಾರರ ಬದುಕಿಗೆ ಸಂಕಷ್ಟ ತಂದೊಡ್ಡುತ್ತಿರುವುದರಿಂದ ಅದನ್ನು ಕೂಡಲೆ ಹಿಂಪಡೆಯಬೇಕು ಸೇರಿದಂತೆ ಹಲವು ನಿರ್ಣಯಗಳನ್ನು ಸೋಮವಾರ ಕುಂದಾಪುರದಲ್ಲಿ ನಡೆದ ಮೊವಾಡಿ ಚಲೋ ಸಮಾವೇಶದಲ್ಲಿ ಕರ್ನಾಟಕ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶ್ಯಾಮ ರಾಜ್ ಬಿರ್ತಿ ಮಂಡಿಸಿದರು.
ಮೊವಾಡಿಯ ಕೊರಗ ಕುಟುಂಬದ ಯುವಕರ ಮೇಲೆ ದಾಖಲಾಗಿರುವ ಪ್ರಕರಣವನ್ನು ರಾಜ್ಯ ಸಚಿವ ಸಂಪುಟ ಕೂಡಲೇ ಹಿಂಪಡೆಯಬೇಕು. ದನದ ಹೆಸರಿನಲ್ಲಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದವರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೂಕ್ತ ಕಾನೂನನ್ನು ಜಾರಿಗೆ ತರಬೇಕು. ಮೇಲಿಂದ ಮೇಲೆ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ಮತ್ತು ಅಸ್ಪೃಶ್ಯತೆ ತಡೆಗಾಗಿ ಸರಕಾರ ಅಸ್ಪೃಶ್ಯತಾ ತಡೆ ಕಾನೂನನ್ನು ಪರಿಣಾಮ ಕಾರಿಯಾಗಿ ಜಾರಿಗೆ ತರಬೇಕು.
ದನದ ಮಾಂಸ ಸೇರಿದಂತೆ ದಲಿತರ, ಅಲ್ಪಸಂಖ್ಯಾತರ, ತಳ ಸಮುದಾಯ ಗಳ ಆಹಾರದ ಹಕ್ಕು ರಕ್ಷಿಸುವ ಜವಾಬ್ದಾರಿಯನ್ನು ಸರಕಾರ ಸರಿಯಾಗಿ ನಿರ್ವಹಿಸಬೇಕು. ಪ್ರತಿಯೊಂದು ದಲಿತ ಕುಟುಂಬಕ್ಕೆ ಕನಿಷ್ಠ 5 ಎಕರೆ ಭೂಮಿಯನ್ನು ಸರಕಾರ ನೀಡಬೇಕು. ಕೊರಗ ಮತ್ತಿತರ ಮೂಲ ನಿವಾಸಿಗಳಿಗೆ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಅರಣ್ಯ ಭೂಮಿಗಳನ್ನು ಒದಗಿಸಲು ಮಹಮ್ಮದ್ ಪೀರ್ ಸಮಿತಿಯ ವರದಿಯ ಶಿಫಾರಸುಗಳನ್ನು ಕಾರ್ಯಗತಗೊಳಿಸಬೇಕು.
ಬಲಪಂಥೀಯ ಮತ್ತು ಭ್ರಷ್ಟ ರಾಜಕಾರಣವನ್ನು ಹಿಮ್ಮೆಟ್ಟಿಸುವುದು. ಹಿಂದುಳಿದ ಸಮುದಾಯಗಳ ಯುವಕರು ಸಂಘ ಪರಿವಾರದ ಬಳಕೆಯ ವಸ್ತುಗಳಾಗುವುದನ್ನು ತಡೆಯುವುದರ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅಳಿವಿನಂಚಿನಲ್ಲಿರುವ ಕೊರಗ ಸಮುದಾಯದ ಉಳಿವಿಗಾಗಿ ಪ್ರತ್ಯೇಕ ಮೀಸ ಲಾತಿಯನ್ನು ಜಾರಿಗೊಳಿಸಬೇಕು. ಬಾಕಿ ಇರುವ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು ಮತ್ತು ಭಡ್ತಿ ಮೀಸಲಾತಿಯಲ್ಲಿ ಉದ್ಭವಿಸಿರುವ ಸಮಸ್ಯೆ ನಿವಾರಣೆಗಾಗಿ ಸೂಕ್ತ ಸಂವಿಧಾನಾತ್ಮಕ ಕ್ರಮ ಜರಗಿಸಬೇಕು.
ರಾಜ್ಯದಲ್ಲಿ ಲ್ಯಾಂಡ್ ಆಡಿಟ್ ಕಾರ್ಯವನ್ನು ಕಾಲ ಮಿತಿಯಲ್ಲಿ ನಡೆಸಿ, ಒತ್ತುವರಿಯಾಗಿರುವ ಭೂಮಿಯನ್ನು ವಶಕ್ಕೆ ಪಡೆಯಬೇಕು. ಕೋಳಿ, ಕುರಿ ಗಳನ್ನು ಆಹಾರಕ್ಕಾಗಿ ಸಾಕುವ ವ್ಯವಸ್ಥೆ ಇರುವಂತೆ ಆಹಾರಕ್ಕಾಗಿ ಬಳಸುವ ಗೋ ಸಂತತಿಯ ಪ್ರತ್ಯೇಕ ತಳಿಗಳನ್ನು ಬೆಳೆಸಲು ಅವಕಾಶ ಒದಗಿಸಬೇಕು. ಜಾನು ವಾರು ಸಾಗಾಟಕ್ಕೆ ಇರುವ ನಿರ್ಬಂಧಗಳನ್ನು ಸಡಿಲಿಸಬೇಕು. ಸಾಗಾಟಗಾರರ ಮೇಲೆ ಹಲ್ಲೆ ನಡೆಸುವ ಪ್ರವೃತ್ತಿಯನ್ನು ಹತ್ತಿಕ್ಕಲು ಸರಿಯಾದ ಶಿಕ್ಷೆಯನ್ನು ವಿಧಿಸಲು ವಿಶೇಷ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಲಾಯಿತು.







