ಅಯೋಧ್ಯೆ: ಆಕಳ ಹಾಲನ್ನು ಸೇವಿಸಿ ಉಪವಾಸ ಮುರಿಯಲಿರುವ ಆರೆಸ್ಸೆಸ್ ಮುಸ್ಲಿಂ ಗುಂಪು

ಲಕ್ನೋ,ಜೂ.13: ಆರೆಸ್ಸೆಸ್‌ನ ಅಂಗಸಂಸ್ಥೆ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್‌ಎಂ) ಬುಧವಾರ ಅಯೋಧ್ಯೆಯಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದು, ರಮಝಾನ್ ವ್ರತಾಚರಣೆಯಲ್ಲಿರುವವರಿಗೆ ತಮ್ಮ ದಿನದ ಉಪವಾಸವನ್ನು ಮುರಿಯಲು ಒಂದು ಲೋಟ ಆಕಳ ಹಾಲನ್ನು ನೀಡಲಿದೆ. ರಿವಾಜಿನಂತೆ ಮುಸ್ಲಿಮರು ಖರ್ಜೂರ ಅಥವಾ ನೀರು ಸೇವಿಸುವುದರೊಂದಿಗೆ ತಮ್ಮ ಉಪವಾಸವನ್ನು ಮುರಿಯುತ್ತಾರೆ. ಹೀಗಾಗಿ ಆಕಳ ಹಾಲಿನ ಸೇವನೆಯೊಂದಿಗೆ ಇಫ್ತಾರ್ ಆಚರಣೆ ವಿಶಿಷ್ಟವಾಗಲಿದೆ.
ಎಂಆರ್‌ಎಂ ಬಾಬ್ರಿ ಮಸೀದಿ-ರಾಮ ಜನ್ಮಭೂಮಿ ಪ್ರಕರಣದಲ್ಲಿ ಅತ್ಯಂತ ಹಿರಿಯ ಕಕ್ಷಿದಾರರಾಗಿದ್ದ ದಿ.ಹಾಶಿಂ ಅನ್ಸಾರಿಯವರ ಪುತ್ರ ಇಕ್ಬಾಲ್ ಅನ್ಸಾರಿ ಸೇರಿದಂತೆ ಅಯೋಧ್ಯೆಯ ಎಲ್ಲ ಮುಸ್ಲಿಂ ಗಣ್ಯರನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಿದೆ. ಹಿರಿಯ ಆರೆಸ್ಸೆಸ್ ನಾಯಕರಾದ ಇಂದ್ರೇಶ ಕುಮಾರ್ ಮತ್ತು ಮುರಾರಿ ದಾಸ್ ಅವರೂ ಕೂಟದಲ್ಲಿ ಉಪಸ್ಥಿತರಿರುತ್ತಾರೆ.
ಎಂಆರ್‌ಎಂ ಮಾಮೂಲಾಗಿ ದೇಶಾದ್ಯಂತ ಇಫ್ತಾರ್ ಕೂಟಗಳನ್ನು ಆಯೋಜಿಸುತ್ತದೆ. ಆದರೆ ಈ ಬಾರಿ ಈ ಸಂದರ್ಭವನ್ನು ಗೋಹತ್ಯೆ ವಿರುದ್ಧ ಅರಿವನ್ನು ಮೂಡಿಸಲು ಬಳಸಿಕೊಳ್ಳುತ್ತಿದೆ. ಹೀಗಾಗಿ ಆಕಳ ಹಾಲಿನ ಸೇವನೆಯೊಂದಿಗೆ ರಮಝಾನ್ ಉಪವಾಸ ವನ್ನು ಮುರಿಯುವಂತೆ ಮತ್ತು ಮಾಂಸವನ್ನು ತ್ಯಜಿಸುವಂತೆ ಅದು ಮುಸ್ಲಿಮರನ್ನು ಆಗ್ರಹಿಸುತ್ತಿದೆ.
ಗೋಹತ್ಯೆಯನ್ನು ಇಸ್ಲಾಮ್‌ನಲ್ಲಿಯೂ ನಿಷೇಧಿಸಲಾಗಿದೆ. ಆ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸಲು ನಾವು ಈ ಸಂದರ್ಭವನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಎಂಆರ್‌ಎಂನ ಉ.ಪ್ರದೇಶ ಮತ್ತು ಉತ್ತರಾಖಂಡ ಘಟಕಗಳ ಉಸ್ತುವಾರಿ ರಯೀಸ್ ಖಾನ್ ಹೇಳಿದರು.







