290 ಕೋ.ರೂ.ವಂಚನೆ:ಸಿಬಿಐನಿಂದ ಅಭಿಜಿತ್ ಗ್ರೂಪ್ ಪ್ರವರ್ತಕರ ಸೆರೆ

ಹೊಸದಿಲ್ಲಿ,ಜೂ.13: ಕೆನರಾ ಮತ್ತು ವಿಜಯ ಬ್ಯಾಂಕ್‌ಗಳಿಗೆೆ 290 ಕೋ.ರೂ.ಗಳನ್ನು ವಂಚಿಸಿದ್ದ ಆರೋಪದಲ್ಲಿ ಪ್ರಮುಖ ಗಣಿಗಾರಿಕೆ ಕಂಪನಿ ಅಭಿಜಿತ್ ಗ್ರೂಪ್ನ ಪ್ರವರ್ತಕ ರಾದ ಮನೋಜ್ ಜೈಸ್ವಾಲ್ ಮತ್ತು ಅಭಿಷೇಕ್ ಜೈಸ್ವಾಲ್ ಹಾಗೂ ಕೆನರಾ ಬ್ಯಾಂಕಿನ ಮಾಜಿ ಉಪ ಮಹಾ ಪ್ರಬಂಧಕ(ಡಿಜಿಎಂ) ಟಿ.ಎಲ್.ಪೈ ಅವರನ್ನು ಸಿಬಿಐ ಬಂಧಿಸಿದೆ.
ಇದೊಂದು ಬೃಹತ್ ಪ್ರಮಾಣದ ಹಗರಣವಾಗಿದೆ ಎಂದು ತನಿಖೆಯು ಸುಳಿವು ನೀಡಿದೆ. ಅಭಿಜಿತ್ ಗ್ರೂಪ್ಗೆ ಸೇರಿದ 13 ಕಂಪನಿಗಳು 20ಕ್ಕೂ ಅಧಿಕ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲಗಳನ್ನು ಪಡೆದುಕೊಂಡಿದ್ದು, ಇವುಗಳನ್ನು 2014ರಿಂದ ಅನುತ್ಪಾದಕ ಆಸ್ತಿಗಳನ್ನಾಗಿ ಪರಿವರ್ತಿಸಲಾಗಿದೆ ಮತ್ತು ಇದು 11,000 ಕೋ.ರೂ.ಗಳ ಸಾಲಬಾಕಿಗೆ ಕಾರಣವಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿದವು.
ಕ್ರಿಮಿನಲ್ ಒಳಸಂಚು ಮತ್ತು ವಂಚನೆ ಆರೋಪದಲ್ಲಿ ಸಿಬಿಐ ಆರೋಪಿಗಳ ವಿರುದ್ಧ 2015ರಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಕೆನರಾ ಬ್ಯಾಂಕಿಗೆ ಸುಮಾರು 218.55 ಕೋ.ರೂ ಮತ್ತು ವಿಜಯ ಬ್ಯಾಂಕಿಗೆ ಸುಮಾರು 71.92 ಕೋ.ರೂ.ಗಳ ನಷ್ಟವನ್ನುಂಟು ಮಾಡಲಾಗಿದೆ ಎಂದು ಸಿಬಿಐ ತನ್ನ ಆರೋಪ ಪಟ್ಟಿಯಲ್ಲಿ ಹೇಳಿದೆ. ಆರೋಪಿಗಳು 2011-13ರ ಅವಧಿಯಲ್ಲಿ ಈ ವಂಚನೆಯನ್ನೆಸಗಿದ್ದರು.





