ಎಲ್ಲ ಜಿಲ್ಲಾ ಪ್ರಧಾನ ಅಂಚೆ ಕಚೇರಿಗಳಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಸ್ಥಾಪನೆಗೆ ಸರಕಾರದ ನಿರ್ಧಾರ

ಭುವನೇಶ್ವರ,ಜೂ.13: ಜನರಿಗೆ, ವಿಶೇಷವಾಗಿ ದೂರದ ಪ್ರದೇಶಗಳ ನಿವಾಸಿಗಳಿಗೆ ಪಾಸ್‌ಪೋರ್ಟ್ ಸೇವೆ ಸುಲಭವಾಗಿ ದೊರೆಯುವಂತಾಗಲು ಮುಂದಿನ ಎರಡು ವರ್ಷಗಳಲ್ಲಿ ದೇಶದ ಎಲ್ಲ 800 ಜಿಲ್ಲಾ ಪ್ರಧಾನ ಅಂಚೆ ಕಚೇರಿಗಳಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಆರಂಭಿಸಲು ಕೇಂದ್ರ ಸರಕಾರವು ನಿರ್ಧರಿಸಿದೆ.
ಮಂಗಳವಾರ ಇಲ್ಲಿ ಈ ವಿಷಯವನ್ನು ಪ್ರಕಟಿಸಿದ ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಕೆ.ಸಿಂಗ್ ಅವರು, ಈ ವರ್ಷ 150 ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.ಯಾವುದೇ ಪ್ರಜೆ ಪಾಸ್‌ಪೋರ್ಟ್‌ಗಾಗಿ ಬಹಳ ದೂರ ಪ್ರಯಾಣಿಸುವಂತಾಗ ಬಾರದು ಎಂದು ನಾವು ನಿರ್ಧರಿಸಿದ್ದೇವೆ. ಪಾಸ್‌ಪೋರ್ಟ್‌ಗಳನ್ನು ಪಡೆಯಲು ಮತ್ತು ಪಾಸ್‌ಪೋರ್ಟ್ ಸಂಬಂಧಿತ ದೂರುಗಳನ್ನು ಬಗೆಹರಿಸಿಕೊಳ್ಳಲು ದೂರದ ಪ್ರದೇಶಗಳ ಲ್ಲಿರುವ ಜನರಿಗೆ ಕಠಿಣವಾಗುತ್ತಿದೆ ಎಂದರು.
ಪಾಸ್‌ಪೋರ್ಟ್ ಸೇವೆಗಳನ್ನು ವಿಸ್ತರಿಸಿ ಹೆಚ್ಚಿನ ಜನರಿಗೆ ತಲುಪುವಂತೆ ಮಾಡಿರುವ ಜೊತೆಗೆ ಪಾಸ್‌ಪೋರ್ಟ್ ಪಡೆಯಲು ಪ್ರಕ್ರಿಯೆನ್ನೂ ಸಾಕಷ್ಟು ಸರಳಗೊಳಿಸಲಾಗಿದೆ. ಇದರ ಜೊತೆಗೆ ಪಾಸ್‌ಪೋರ್ಟ್ ನೀಡಿಕೆಯ ಇಡೀ ಪ್ರಕ್ರಿಯೆಯನ್ನು ಪಾರದರ್ಶಕ ಗೊಳಿಸಲಾಗಿದ್ದು, ಮಧ್ಯವರ್ತಿಗಳು ಮತ್ತು ದಲ್ಲಾಳಿಗಳನ್ನು ನಿವಾರಿಸಲಾಗಿದೆ ಎಂದೂ ಮೋದಿ ಸರಕಾರವು ಮೂರು ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಿರುವ ಸಂದರ್ಭ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಿಂಗ್ ನುಡಿದರು.







