ವಿಧಾನ ಪರಿಷತ್ ಸಭಾಪತಿ ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿಲುವಳಿ ಮಂಡನೆ
ಬೆಂಗಳೂರು, ಜೂ.13: ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರು ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಿ ಚರ್ಚೆಗೆ ಅವಕಾಶ ನೀಡುವಂತೆ ಮಾಡಿದ ಮನವಿಗೆ ಶಂಕರಮೂರ್ತಿ ಚರ್ಚೆಗೆ ಸಮಯ ನಿಗದಿ ಮಾಡುವುದಾಗಿ ಹೇಳಿ ದನವನ್ನು ಮುಂದೂಡಿದರು.
ಸಭಾಪತಿ ಅಕ್ರಮ ಅವ್ಯವಹಾರಗಳಲ್ಲಿ ತೊಡಗಿ ನೀತಿ ನಿಯಮಗಳನ್ನು ಉಲ್ಲಂಘಿಸಿದರೆ ಮಾತ್ರ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನಿಯಮಾವಳಿಯಲ್ಲಿ ಅವಕಾಶ ಇದೆ. ಆದರೆ ನನ್ನ ವಿರುದ್ಧ ಯಾವುದೇ ಆರೋಪ ಇಲ್ಲ. ಹಾಗಾಗಿಯೂ ಚರ್ಚೆಗೆ ಸಮಯ ನಿಗದಿ ಮಾಡುವುದಾಗಿ ಹೇಳಿ ಸದನವನ್ನು ಮುಂದೂಡಿದರು.
ಸದ್ಯದ ಮಟ್ಟಿಗೆ ಜೆಡಿಎಸ್ ತಟಸ್ಥವಾಗಿದ್ದು, ಅವಿಶ್ವಾಸ ನಿರ್ಣಯ ವಿಚಾರದಲ್ಲಿ ಜೆಡಿಎಸ್ ಪಾತ್ರ ನಿರ್ಣಾಯಕವಾಗಿದೆ. ನಿರ್ಣಾಯಕ ಪಾತ್ರ ವಹಿಸಲಿರುವ ಜೆಡಿಎಸ್ ನಿರ್ಣಯ ಪರ ಮತ ಚಲಾಯಿಸಿದರೂ ಅಥವಾ ತಟಸ್ಥ ನಿಲುವು ತಾಳಿದರೂ ಶಂಕರಮೂರ್ತಿ ಅವರು ರಾಜೀನಾಮೆ ಕೊಡಬೇಕಾದಂತಹ ಪರಿಸ್ಥಿತಿ ಎದುರಾಗಲಿದೆ.
ಸಂಖ್ಯಾಬಲದ ಚದುರಂಗದಾಟದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬಲದ ಮುಂದೆ ಬಿಜೆಪಿ ಬಲ ಮಂಕಾಗಲಿದ್ದು, ಶಂಕರಮೂರ್ತಿ ರಾಜೀನಾಮೆ ಕೊಡುವುದನ್ನು ಬಿಟ್ಟರೆ ಅನ್ಯ ವಾರ್ಗ ಇಲ್ಲವಾಗಿದೆ.
ಆದರೆ, ನಿರ್ಣಯದ ಮೇಲೆ ಸುದೀರ್ಘ ಚರ್ಚೆಗೆ ಮತ್ತು ಮತದಾನಕ್ಕೆ ಅವಕಾಶ ಕೊಟ್ಟರೂ ಜೆಡಿಎಸ್ ಏನಾದರೂ ತಟಸ್ಥ ನಿಲುವು ತಾಳಿದರೆ ಗೆಲುವು ಕಾಂಗ್ರೆಸ್ ಪರವಾಗಲಿದೆ. ಒಂದು ವೇಳೆ ಬಿಜೆಪಿ ಜತೆ ಕೈ ಜೋಡಿಸಿದರೆ ಆಗಿನ ಚಿತ್ರಣವೇ ಬದಲಾಗಲಿದೆ.
ಆಡಳಿತ ಪಕ್ಷದ ಸದಸ್ಯರಾದ ವಿ.ಎಸ್. ಉಗ್ರಪ್ಪ, ಶರಣಪ್ಪಮಟ್ಟೂರು ಮತ್ತು ಕೆ.ಸಿ. ಕೊಂಡಯ್ಯ, ಕೆ.ಅಬ್ದುಲ್ ಜಬ್ಬಾರ್, ಎಂ.ಎ.ಗೋಪಾಲಸ್ವಾಮಿ, ಆರ್. ಪ್ರಸನ್ನಕುಮಾರ್ ಹಾಗೂ ಎಚ್.ಎಂ.ರೇವಣ್ಣ ಇತರರು, ವಿಧಾನ ಪರಿಷತ್ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ-165 ಹಾಗೂ ಸಂವಿಧಾನದ 183ನೆ ಅನುಚ್ಛೇದದ ಸಿ ಖಂಡದಡಿ ಸಭಾಪತಿ ಶಂಕರಮೂರ್ತಿ ಅವರನ್ನು ಸಭಾಪತಿ ಸ್ಥಾನದಿಂದ ತೆಗೆದು ಹಾಕುವ ನಿರ್ಣಯವನ್ನು ಸದನದಲ್ಲಿ ಮಂಡಿಸಿದ್ದು, ಇದರಿಂದಾಗಿ ಸಂಖ್ಯಾಬಲದ ಆಧಾರದ ಮೇಲೆ ಸಭಾಪತಿ ಶಂಕರಮೂರ್ತಿ ಅವರ ಸಭಾಪತಿ ಸ್ಥಾನದ ಭವಿಷ್ಯ ನಿರ್ಧಾರವಾಗಿದೆ.
ಜೆಡಿಎಸ್ ಪಕ್ಷ ಬಿಜೆಪಿ ಜತೆ ಕೈಜೋಡಿಸಲಿದೆಯೇ ಅಥವಾ ತಟಸ್ಥವಾಗುಳಿಯಲಿದೆಯೇ ಎನ್ನುವುದು ಯಕ್ಷ ಪ್ರಶ್ನೆಯಾಗಿದ್ದು. ಒಂದು ವೇಳೆ ಬಿಜೆಪಿ ಜತೆ ಕೈಜೋಡಿಸಿದರೆ ಅವಿಶ್ವಾಸಕ್ಕೆ ಸೋಲಾಗಲಿದೆ. ಜೆಡಿಎಸ್ ತಟಸ್ಥವಾಗಿ ಉಳಿದುಕೊಂಡರೆ ಸಭಾಪತಿ ಶಂಕರಮೂರ್ತಿ ತಮ್ಮ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.
ವಿಧಾನಪರಿಷತ್‌ನ 75 ಸದಸ್ಯ ಬಲದಲ್ಲಿ ವಿಮಲಾಗೌಡ ಅವರ ನಿಧನದಿಂದ ಒಂದು ಸ್ಥಾನ ತೆರವಾಗಿದ್ದು, ಇನ್ನುಳಿದ 74 ಸದಸ್ಯರ ಪೈಕಿ ಆಡಳಿತರೂಢಾ ಕಾಂಗ್ರೆಸ್ ಪಕ್ಷ 34, ಬಿಜೆಪಿ ಸಭಾಪತಿ ಸೇರಿ 22, ಜೆಡಿಎಸ್ 13 ಹಾಗೂ ಪಕ್ಷೇತರರು 5 ಸದಸ್ಯರಿದ್ದಾರೆ. ಐದು ಪಕ್ಷೇತರರಲ್ಲಿ ಬಸವನಗೌಡ ಪಾಟೀಲ್ ಯತ್ನಾಳ ಮತ್ತು ಡಿ.ಯು. ಮಲ್ಲಿಕಾರ್ಜುನ ಬಿಜೆಪಿ ಪರವಾಗಿದ್ದು, ಇನ್ನುಳಿದ ಮೂರು ಪಕ್ಷೇತರರಾದ ಬಿ.ಎಸ್. ಸುರೇಶ್, ಎಂ.ಡಿ.ಲಕ್ಷ್ಮೀನಾರಾಯಣ ಹಾಗೂ ವಿವೇಕ್‌ರಾವ್ ಪಾಟೀಲ್ ಕಾಂಗ್ರೆಸ್ ಪರವಾಗಿದ್ದಾರೆ.
74 ಸದಸ್ಯ ಸ್ಥಾನದ ಪೈಕಿ ಕಾಂಗ್ರೆಸ್‌ಗೆ ಪಕ್ಷೇತರರು ಸೇರಿ 37, ಬಿಜೆಪಿಗೆ ಸಭಾಪತಿ, ಪಕ್ಷೇತರರು ಸೇರಿ 24, ಹಾಗೂ ಜೆಡಿಎಸ್ 13 ಸದಸ್ಯರಿದ್ದಾರೆ. ಸಭಾಪತಿ ಸ್ಥಾನ ಪಡೆಯಲು ಅರ್ಧಕ್ಕಿಂತ ಹೆಚ್ಚಿನ ಸಂಖ್ಯಾಬಲ ಕಾಂಗ್ರೆಸ್‌ಗೆ ಅಗತ್ಯವಾಗಿದೆ. ಸದ್ಯ 74 ಸದಸ್ಯ ಬಲದಲ್ಲಿ ಕಾಂಗ್ರೆಸ್ ಸಭಾಪತಿ ಸ್ಥಾನ ಪಡೆಯಲು 38 ಸ್ಥಾನದ ಅಗತ್ಯವಿದ್ದು, ಪಕ್ಷೇತರರು ಸೇರಿ 37 ಸದಸ್ಯರನ್ನು ಹೊಂದಿದ್ದು, ಒಂದು ಸ್ಥಾನದ ಕೊರತೆ ಎದುರಿಸುತ್ತಿದೆ.