ಕಾಂಗ್ರೆಸ್ ಪಕ್ಷ ತ್ಯಜಿಸಲು ಕೆ.ಪಿ. ನಂಜುಂಡಿ ನಿರ್ಧಾರ
ಬೆಂಗಳೂರು, ಜೂ.13: ವಿಧಾನ ಪರಿಷತ್‌ಗೆ ತನ್ನನ್ನು ನಾಮನಿರ್ದೇಶನ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಧೋರಣೆ ಖಂಡಿಸಿ ವಿಶ್ವಕರ್ಮ ಸಮುದಾಯದ ನಾಯಕ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ.ನಂಜುಂಡಿ ಕಾಂಗ್ರೆಸ್ ಪಕ್ಷದೊಂದಿಗಿನ 16ವರ್ಷಗಳ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದ್ದಾರೆ.
ಮಂಗಳವಾರ ನಗರದಲ್ಲಿನ ತಮ್ಮ ನಿವಾಸದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗಿಂತಲೂ ನಾನೇ ಕಾಂಗ್ರೆಸ್ ಪಕ್ಷದಲ್ಲಿ ಸೀನಿಯರ್, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಶ್ವಕರ್ಮ ಜನಾಂಗದ ಶಕ್ತಿಯನ್ನು ಪ್ರದರ್ಶನ ಮಾಡುತ್ತೇನೆ ಎಂದು ಎಚ್ಚರಿಸಿದರು.
16 ವರ್ಷಗಳ ಹಿಂದೆ ನಾನು ತಪ್ಪುನಿರ್ಧಾರ ಮಾಡಿದೆ. ಸಮಾಜದ ಮುಖಂಡರು ಬೇಡವೆಂದರೂ ಕಾಂಗ್ರೆಸ್ ಸೇರುವುದಾಗಿ ಅವರ ಮನವೊಲಿಸಿದೆ. ಅದು ತಪ್ಪು ಅಂತಾ ಈಗ ಸಾಬೀತಾಗಿದೆ. ಹೀಗಾಗಿ ನನ್ನ ಸಮಾಜದ ಮುಖಂಡರು, ಸ್ವಾಮೀಜಿಗಳು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ನಂಜುಂಡಿ ಹೇಳಿದರು.
ಪರಿಷತ್ ಸ್ಥಾನ ಭಿಕ್ಷೆಯಲ್ಲ. ನನ್ನ ಅರ್ಹತೆಗಾಗಿ ಸಿಗಬೇಕಾಗಿತ್ತು. ಆದರೆ, ಕೊಡಲಿಲ್ಲ. ನೀವೆ ಅದನ್ನು ಇಟ್ಟುಕೊಳ್ಳಿ, ನಾವೂ ಮುಖ್ಯವಾಹಿನಿಗೆ ಬಂದೇ ಬರುತ್ತೇವೆ. ಆಗ ಗೊತ್ತಾಗುತ್ತೆ ನಮ್ಮ ಮಹತ್ವ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಮತ್ತೊಮ್ಮೆ ದೇವರಾಜ ಅರಸು ಅವರನ್ನು ನೋಡಬಹುದು ಎಂಬ ಆಸೆ ಎಲ್ಲರಲ್ಲೂ ಇತ್ತು. ಆದರೆ, ಅದು ಈಡೇರಲಿಲ್ಲ ಎಂದು ಅವರು ತಿಳಿಸಿದರು.
ಶೋಷಿತ ಸಮಾಜಗಳನ್ನು ಮೇಲೆತ್ತಿದರೆ ಆಗ ಅವರು ದೇವರಾಜ ಅರಸು ಆಗುತ್ತಿದ್ದರು. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರುವ ಮುನ್ನವೆ ನಾನು ಕಾಂಗ್ರೆಸ್‌ಗೆ ಬಂದಿದ್ದೇನೆ. ಅವರು ಬಂದು 8-9 ವರ್ಷವಾಯ್ತು. ಆದರೆ, ನಾನು 16 ವರ್ಷಗಳಿಂದ ಕಾಂಗ್ರೆಸ್‌ಗಾಗಿ ದುಡಿದ್ದಿದ್ದೇನೆ. ಅವರಿಗೆ ಎಲ್ಲವೂ ಬೇಕು, ನಮಗೆ ಮಾತ್ರ ಏನು ಬೇಡವೇ ಎಂದು ನಂಜುಂಡಿ ಪ್ರಶ್ನಿಸಿದರು.
ವಿಶ್ವಕರ್ಮ ಸಮಾಜ ಕಾಂಗ್ರೆಸ್ ಪಕ್ಷದ ಋಣದಲ್ಲಿಲ್ಲ. ಆದರೆ, ಕಾಂಗ್ರೆಸ್‌ನವರು ನಮ್ಮ ಋಣದಲ್ಲಿದ್ದಾರೆ. ನನಗೆ ಬೇರೆ ಸಮಾಜದವರು ಬೈದಿದ್ದಾರೆ. ಆದರೂ ನಾನು ಪಕ್ಷಕ್ಕೆ ದ್ರೋಹ ಮಾಡಿಲ್ಲ. ಒಂದು ಮಟ್ಟಕ್ಕೆ ಒಂದು ಸಮಾಜವನ್ನು ನಿರ್ಲಕ್ಷಿಸಬೇಕು. ಆದರೆ, ಈ ಮಟ್ಟಕ್ಕೆ ಅಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ನನ್ನುನ್ನು ಪರಿಷತ್ ಸದಸ್ಯರನ್ನಾಗಿ ಏಕೆ ಮಾಡಲಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ನನಗೆ ಭಾಷಣ ಮಾಡಲು ಬರಲ್ವ, ವಿದ್ಯಾವಂತನಲ್ವ, ಸಂಘಟನೆ ಗೊತ್ತಿಲ್ವ, ಆದರೂ ಏಕೆ ಕೈ ಬಿಟ್ಟರು ಅಂತಾ ಕಾಂಗ್ರೆಸ್ ನಾಯಕರು ಹೇಳಬೇಕು. ನಾನಿನ್ನೂ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿಲ್ಲ. ನನಗೆ ಸಿದ್ದರಾಮಯ್ಯಗಿಂತ ಸೋನಿಯಾಗಾಂಧಿ ಚೆನ್ನಾಗಿ ಗೊತ್ತು. ಅವರ ಕೈಯಲ್ಲೆ ರಾಜೀನಾಮೆ ನೀಡುತ್ತೇನೆ ಎಂದು ನಂಜುಂಡಿ ಹೇಳಿದರು.
ನಮ್ಮ ಸಮುದಾಯದ ಸ್ವಾಮೀಜಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜೊತೆ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ಸೇರುವಾಗ ಕೈಗೊಂಡ ಆತುರದ ನಿರ್ಧಾರದಿಂದ ಕೈ ಸುಟ್ಟುಕೊಂಡಿದ್ದೇನೆ. ಹೀಗಾಗಿ ಮುಂದೆ ಯಾವ ಪಕ್ಷ ಸೇರಬೇಕೆಂಬುದರ ಕುರಿತು ಯೋಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಅವರು ತಿಳಿಸಿದರು.
ವಿಶ್ವಕರ್ಮ ಸಮಾಜದ ಸ್ವಾಮೀಜಿ ಮಾತನಾಡಿ, ಕೆ.ಪಿ.ನಂಜುಂಡಿಯವರಿಗೆ ಕಾಂಗ್ರೆಸ್ ಪಕ್ಷದಿಂದ ಅನ್ಯಾಯವಾಗಿದೆ. ನಮ್ಮ ನಂಬಿಕೆಗೆ ಕಾಂಗ್ರೆಸ್ ಚ್ಯುತಿ ತಂದಿದೆ. ಸಿದ್ದರಾಮಯ್ಯ ಮಾಡಿರುವ ಈ ಮೋಸದಿಂದ ವಿಶ್ವಕರ್ಮ ಸಮಾಜಕ್ಕೆ ಏನು ನಷ್ಟವಿಲ್ಲ. ನಮ್ಮಲ್ಲಿನ ಒಗ್ಗಟ್ಟು ಮತ್ತಷ್ಟು ಹೆಚ್ಚುತ್ತದೆ. ಆದರೆ, ನೀವು ಒಂದು ಬಲಿಷ್ಠ ಸಮಾಜದ ಬೆಂಬಲವನ್ನು ಕಳೆದುಕೊಂಡಿದ್ದೀರಾ ಎಂದರು