ಗಾಬರಿಯಾಗುವ ಅವಶ್ಯಕತೆಯಿಲ್ಲ: ಎಚ್.ಡಿ.ಕುಮಾರಸ್ವಾಮಿ
ಜಾಮೀನು ಅರ್ಜಿ ತಿರಸ್ಕೃತ
ಬೆಂಗಳೂರು, ಜೂ.13: ಜಂತಕಲ್ ಗಣಿಗಾರಿಕೆಗೆ ಸಂಬಂಧಿಸಿದ ತನ್ನ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವುದಕ್ಕೆ ಗಾಬರಿಯಾಗುವ ಅವಶ್ಯಕತೆಯಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಕೀಲರು ನನಗೆ ಕೊಡುವ ಸಲಹೆಯಂತೆ ನಾನು ನಡೆದುಕೊಳ್ಳುತ್ತೇನೆ. ಮುಂದಿನ ನಮ್ಮ ನಡೆ ಏನಿರಬೇಕೆಂಬುದನ್ನು ವಕೀಲರೆ ನಿರ್ಧರಿಸುತ್ತಾರೆ ಎಂದರು.
ಇಲ್ಲಿಯವರೆಗೆ ನ್ಯಾಯಾಲಯವು ತಾತ್ಕಾಲಿಕ ಜಾಮೀನು ಕೊಟ್ಟಿತ್ತು. ಈಗ ಜಾಮೀನು ಅಗತ್ಯವಿಲ್ಲ ಎಂದು ತೀರ್ಪು ನೀಡಿದೆ. ಇದರಿಂದ ನಾನು ಗಾಬರಿ ಆಗುವ ಅವಶ್ಯಕತೆಯಿಲ್ಲ ಎಂದು ಅವರು ತಿಳಿಸಿದರು.
ನನ್ನ ವಿರುದ್ಧ ಕುತಂತ್ರ ಹೂಡಲಾಗಿದೆ. ಎಸ್‌ಐಟಿಯವರು ಜನಾರ್ದನರೆಡ್ಡಿ ಬಳಿ ದಾಖಲೆ ಕೇಳಿದ್ದಾರೆ. 150 ಕೋಟಿ ರೂ.ಗಳ ಗಣಿ ಲಂಚ ಪ್ರಕರಣ ನಡೆದೇ ಇಲ್ಲ. ಅದರಲ್ಲಿ ನಾನು ಭಾಗಿಯೂ ಆಗಿಲ್ಲ. ಇನ್ನೆಂಥ ದಾಖಲೆಯನ್ನು ಜನಾರ್ದನರೆಡ್ಡಿ ಕೊಡುತ್ತಾರೆ. 11ವರ್ಷಗಳಿಂದ ದಾಖಲೆ ಕಾಪಾಡಿಕೊಂಡು ಬಂದಿದ್ದಾರಂತೆ, ಜಯ ಅಂತಿಮವಾಗಿ ನನಗೆ ಸಿಗಲಿದೆ. ನ್ಯಾಯಾಲಯದ ದಾರಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕುಮಾರಸ್ವಾಮಿ ಹೇಳಿದರು.