ಖಾಸಗಿ ಕಂಪನಿಗಳ ಧೋರಣೆ, ಎಚ್ಚೆತ್ತುಕೊಳ್ಳಬೇಕಾದ ಸರಕಾರ: ಬಂಜಗೆರೆ ಜಯಪ್ರಕಾಶ್
ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಕುರಿತು ಚಿಂತನಾಗೋಷ್ಠಿ
ಬೆಂಗಳೂರು, ಜೂ.13: ತಮ್ಮ ಸ್ವಾರ್ಥಕ್ಕಾಗಿ ತಮಗೆ ಬೇಕಾದಂತೆ ಅನುಕೂಲಗಳನ್ನು ನಿರ್ಮಿಸಿಕೊಳ್ಳುತ್ತಿರುವ ಖಾಸಗಿ ಕಂಪೆನಿಗಳ ಧೋರಣೆಯ ಕುರಿತು ಸರಕಾರ ಎಚ್ಚರದಿಂದ ಸೂಕ್ಷ್ಮವಾಗಿ ಗ್ರಹಿಸುವ ಅನಿವಾರ್ಯತೆ ಇದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.
ಮಂಗಳವಾರ ನಗರದ ಕಸಾಪದಲ್ಲಿ ಸ್ವಾಭಿಮಾನಿ ಕರ್ನಾಟಕ ವೇದಿಕೆ ಆಯೋಜಿಸಿದ್ದ ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಕುರಿತು ಚಿಂತನಾಗೋಷ್ಠಿ ಹಾಗೂ 100ನೆ ವಸಂತಕ್ಕೆ ಕಾಲಿಟ್ಟಿರುವ ಡಾ. ಎಚ್.ಎಸ್.ದೊರೆಸ್ವಾಮಿ ಅವರಿಗೆ ಅಭಿನಂದನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಉದ್ಯೋಗವೆಂಬುದು ಹಸಿವಿನ ಪ್ರಶ್ನೆಯಾಗಿದೆ. ಹಾಗಾಗಿ, ನಮ್ಮದೇ ರಾಜ್ಯದ ಜಾಗ ಪಡೆದು, ನೀರು ಕುಡಿದು, ಅನುಕೂಲಗಳನ್ನು ಪಡೆದು ಅಧಿಕಾರಿಯಿಂದ ಕ್ಲರ್ಕ್‌ವರೆಗೆ ಹೊರಭಾಷಿಕರನ್ನು ನೇಮಕ ಮಾಡಿಕೊಂಡರೆ ನಮ್ಮ ರಾಜ್ಯದವರಿಗೆ ಆಗುವ ಅನುಕೂಲವೇನು ಎಂಬುದನ್ನು ಸರಕಾರ ಮನಗಾಣಬೇಕು ಎಂದು ತಿಳಿಸಿದರು.
ಕನ್ನಡವೆಂಬುದು ಯಾವುದೇ ಒಂದು ಜಾತಿಯಲ್ಲ, ಅದೊಂದು ಕುಲ. ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಬೇಕು ಎಂದು ಕೇಳಿದ ಮೊದಲ ರಾಜ್ಯ ಕರ್ನಾಟಕ. ಉದ್ಯೋಗದಲ್ಲಿ ಸಿ ಮತ್ತು ಡಿ ಗ್ರೂಪ್‌ನಲ್ಲಿ ಸ್ಥಳೀಯರಿಗೆ ಶೇ. 50ರಿಂದ 80 ಮೀಸಲಾತಿ ನೀಡಬೇಕೆಂಬುದು ಎಲ್ಲ ರಾಜ್ಯಗಳ ಬೇಡಿಕೆಯಾಗಿದೆ. ಅದನ್ನೇ ಸರೋಜಿನಿ ಮಹಿಷಿ ವರದಿಯಲ್ಲೂ ಉಲ್ಲೇಖಿಸಲಾಗಿದ್ದು, ಸರಕಾರ ಆದಷ್ಟು ಶೀಘ್ರದಲ್ಲಿ ಅದನ್ನು ಅನುಷ್ಠಾನಕ್ಕೆ ತರಬೇಕು ಎಂದರು.
ಮಹಿಷಿ ಪರಿಷ್ಕೃತ ವರದಿಯನ್ನು ಸಿದ್ಧಮಾಡಿರುವ ಎಸ್.ಜಿ. ಸಿದ್ದರಾಮಯ್ಯ ಅವರ ನೇತೃತ್ವದ ತಂಡವನ್ನು ಮುಂದಿಟ್ಟುಕೊಂಡು ಖಾಸಗಿ, ಸೇವಾ ವಲಯದಲ್ಲಿ ಕನ್ನಡಿಗರಿಗೆ ಅವಕಾಶ ನೀಡುವಂತೆ ಚುನಾವಣೆ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು ಸರಕಾರದ ಮೇಲೆ ಒತ್ತಡ ತರಬೇಕು ಎಂದು ಸೂಚಿಸಿದರು.
ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಸರೋಜಿನಿ ಮಹಿಷಿ ವರದಿಯಲ್ಲಿ ಕನ್ನಡಿಗರೆಂದರೆ ಯಾರು ಎಂಬುದರ ಕುರಿತು ವಿವರವಾಗಿ ಹೇಳಿದ್ದಾರೆ. ನಮ್ಮ ರಾಜ್ಯದಲ್ಲಿ ಅರ್ಹರು ಇಲ್ಲದಿದ್ದರೆ ಮಾತ್ರ ಬೇರೆ ಭಾಷಿಕರಿಗೆ ಹುದ್ದೆಗಳನ್ನು ನೀಡುವಂತಹ ವಾತಾವರಣ ನಿರ್ಮಾಣವಾದರೆ ಸಂಸ್ಥೆಗಳಿಗೆ ನಮ್ಮಲ್ಲಿ ಆಶ್ರಯ ಕೊಟ್ಟಿದ್ದಕ್ಕೆ ನಮಗೂ ಉಪಯೋಗವಾದಂತಾಗುತ್ತದೆ. ಈ ಕುರಿತು ಇನ್ಫೋಸಿಸ್‌ನ ನಾರಾಯಣಮೂರ್ತಿ ಅಂಥವರಿಗೆ ಮೊದಲು ಪಾಠ ಹೇಳಿ ಮನವರಿಕೆ ಮಾಡಿಕೊಡಬೇಕು. ಸರಕಾರಿ ಅರೆಸರಕಾರಿ ನೌಕರಿಯಲ್ಲೂ ಕನ್ನಡಿಗರಿಗೆ ಪೂರ್ಣ ಆದ್ಯತೆ ಸಿಗುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಸೇರಿದಂತೆ ಇತರರು ಇದ್ದರು.