ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ ಎಂದು ಸಂಸದರ ಬಳಿ ಅಲವತ್ತುಕೊಂಡ ಜಿ.ಪಂ. ಸಿಇಒ
ಮಂಗಳೂರು, ಜೂ. 13: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಶುದ್ಧ ಕುಡಿಯುವ ನೀರು ಪೂರೈಕೆ ಘಟಕಗಳ ಕುರಿತು ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ಎಂಜಿನಿಯರುಗಳು ತಮಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯೇ (ಸಿಇಒ) ಸಂಸದರ ಬಳಿ ಅಲವತ್ತುಕೊಂಡ ಪ್ರಸಂಗ ಮಂಗಳವಾರ ನಡೆಯಿತು!
ಸಂಸದ ನಳಿನ್ ಕುಮಾರ್ ಕಟೀಲ್ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಸಭೆಯ ಅಂತ್ಯದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ವಿವಿಧ ಯೋಜನೆಗಳ ಪ್ರಗತಿ ಕುರಿತು ಸಂಸದರು ಮಾಹಿತಿ ಪಡೆದರು. ಆಗ, ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಕೈಗೆತ್ತಿಕೊಂಡಿರುವ ಶುದ್ಧ ಕುಡಿಯುವ ನೀರು ಘಟಕಗಳ ಅಳವಡಿಕೆ ಬಗ್ಗೆಯೂ ಪ್ರಸ್ತಾಪವಾಯಿತು.
ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಅಧೀಕ್ಷಕ ಎಂಜಿನಿಯರ್ ಮಾತ್ರ ಸಭೆಯಲ್ಲಿದ್ದರು. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರುಗಳು ಸಭೆಗೆ ಬಂದಿರಲಿಲ್ಲ. ಜಿಲ್ಲೆಗೆ ಒಟ್ಟು 152 ಶುದ್ಧ ಕುಡಿಯುವ ನೀರಿನ ಘಟಕಗಳು ಮಂಜೂರಾಗಿವೆ. ಅವುಗಳ ಸದ್ಯದ ಸ್ಥಿತಿ ಏನು ? ಎಂಬ ಪ್ರಶ್ನೆಗೆ ಯಾವ ಅಧಿಕಾರಿಗಳ ಬಳಿಯೂ ಸರಿಯಾದ ಮಾಹಿತಿ ಇರಲಿಲ್ಲ.
ಆಗ ಮಧ್ಯ ಪ್ರವೇಶಿಸಿದ ಜಿಲ್ಲಾ ಪಂ. ಸಿಇಒ ಡಾ.ಎಂ.ಆರ್.ರವಿ, ‘ಬೆರಳೆಣಿಕೆಯಷ್ಟು ಘಟಕಗಳಲ್ಲಿ ಮಾತ್ರ ಶುದ್ಧ ಕುಡಿಯುವ ನೀರು ಲಭ್ಯವಿದೆ. ಹೆಚ್ಚಿನ ಕಡೆಗಳಲ್ಲಿ ಘಟಕಗಳ ಸ್ಥಾಪನೆಯೇ ಆಗಿಲ್ಲ. ಎಂಜಿನಿಯರುಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಅವರನ್ನು ನಂಬಿಕೊಂಡು ನಾನೂ ಸುಳ್ಳು ಹೇಳುವಂತಾಗಿದೆ’ ಎಂದು ಸಂಸದರ ಬಳಿ ಅಳಲು ತೋಡಿಕೊಂಡರು. 152 ಘಟಕಗಳ ವಾಸ್ತವ ಸ್ಥಿತಿ ಕುರಿತು ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನವನ್ನೂ ನೀಡಿದರು.
ನೋಟಿಸ್ ಸುದ್ದಿಗೆ ಬೆದರಿದರು:
ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ ಮತ್ತು ಅವರ ವಿಭಾಗದ ಸಿಬ್ಬಂದಿ ಸಭೆಯ ಮಧ್ಯದಲ್ಲೇ ಎದ್ದು ಹೊರಹೋಗಿದ್ದರು. ಪಾಲಿಕೆಯ ಆರೋಗ್ಯ ವಿಭಾಗಕ್ಕೆ ಸಂಬಂಧಿಸಿದ ವಿಷಯವೊಂದರ ಕುರಿತ ಚರ್ಚೆ ವೇಳೆ ‘ಆರೋಗ್ಯಾಧಿಕಾರಿ ಎಲ್ಲಿದ್ದಾರೆ?’ ಎಂದು ಸಂಸದರು ಪ್ರಶ್ನಿಸಿದರು. ಅವರು ಹೊರಹೋಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ನೋಟಿಸ್ ಜಾರಿ ಮಾಡುವಂತೆ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಅವರಿಗೆ ಸೂಚಿಸಿದರು. ನೋಟಿಸ್ ನೀಡಲು ಸೂಚನೆ ಕೊಟ್ಟಿರುವ ಮಾಹಿತಿ ತಿಳಿಯುತ್ತಿದ್ದಂತೆ ಮಂಜಯ್ಯ ಶೆಟ್ಟಿ ಮತ್ತು ಅವರ ವಿಭಾಗದ ಸಿಬ್ಬಂದಿ ಸಭಾಂಗಣಕ್ಕೆ ದೌಡಾಯಿಸಿದರು.







