300ನೆ ಏಕದಿನ ಪಂದ್ಯವನ್ನಾಡಲು ಯುವರಾಜ್ ಸಿದ್ಧತೆ

ಹೊಸದಿಲ್ಲಿ, ಜೂ.13: ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಗುರುವಾರ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೆ ಸೆಮಿ ಫೈನಲ್ ಪಂದ್ಯದಲ್ಲಿ ಆಲ್‌ರೌಂಡರ್ ಯುವರಾಜ್ ಸಿಂಗ್ 300ನೆ ಏಕದಿನ ಪಂದ್ಯವನ್ನಾಡುವ ಮೂಲಕ ಹೊಸ ಮೈಲುಗಲ್ಲು ತಲುಪಲಿದ್ದಾರೆ.
ಯುವರಾಜ್ ಈ ಮೈಲುಗಲ್ಲು ತಲುಪುತ್ತಿರುವ ಭಾರತದ ಐದನೆ ಹಾಗೂ ವಿಶ್ವದ 19ನೆ ಆಟಗಾರ ಎನಿಸಿಕೊಳ್ಳಲಿದ್ದಾರೆ. ಗರಿಷ್ಠ ಏಕದಿನ ಪಂದ್ಯಗಳನ್ನಾಡಿರುವ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ (463 ಪಂದ್ಯ) ಮೊದಲ ಸ್ಥಾನದಲ್ಲಿದ್ದರೆ, ರಾಹುಲ್ ದ್ರಾವಿಡ್(340), ಮುಹಮ್ಮದ್ ಅಝರುದ್ದೀನ್(334) ಹಾಗೂ ಸೌರವ್ ಗಂಗುಲಿ(308) ಆನಂತರದ ಸ್ಥಾನದಲ್ಲಿದ್ದಾರೆ.
35ರ ಪ್ರಾಯದ ಯುವರಾಜ್ ಐಸಿಸಿ ಟೂರ್ನಿಗಳಲ್ಲಿ ಭಾರತದ ಹಲವು ಯಶಸ್ವಿ ಅಭಿಯಾನದಲ್ಲಿ ಭಾಗಿಯಾಗಿದ್ದರು. 2011ರ ವಿಶ್ವಕಪ್‌ನಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿ ‘ಸರಣಿ ಶ್ರೇಷ್ಠ’ ಪ್ರಶಸ್ತಿ ಜಯಿಸಿದ್ದರು. ತವರಿನಲ್ಲಿ ಭಾರತ ಮೊತ್ತ ಮೊದಲ ಬಾರಿ ಪ್ರಶಸ್ತಿ ಜಯಿಸಲು ಪ್ರಮುಖ ಕಾಣಿಕೆ ನೀಡಿದ್ದರು. ನೈರೋಬಿಯಲ್ಲಿ 2000ರಲ್ಲಿ ನಡೆದಿದ್ದ ಐಸಿಸಿ ನಾಕೌಟ್ ಟೂರ್ನಿಯಲ್ಲಿ ಕೀನ್ಯ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದ ಯುವಿ ಮೂರು ವರ್ಷಗಳ ಬಳಿಕ ನಡೆದಿದ್ದ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದ್ದ ಭಾರತ ತಂಡದ ಸದಸ್ಯರಾಗಿದ್ದರು. ಯುವಿ ಭಾರತದ ಪರ ಹಲವು ಬಾರಿ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿದ್ದಾರೆ.
ಈ ವರ್ಷದ ಜನವರಿಯಲ್ಲಿ ಇಂಗ್ಲೆಂಡ್‌ನ ವಿರುದ್ಧ ದೀರ್ಘ ಸಮಯದ ಬಳಿಕ ಶತಕ ಬಾರಿಸಿ ಮೊದಲಿನ ಲಯಕ್ಕೆ ಮರಳಿದ್ದ ಯುವಿ ಈ ಮೂಲಕ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಪಡೆದಿದ್ದರು. ಪ್ರಸ್ತುತ ಸರಣಿಯಲ್ಲಿ ಪಾಕ್ ವಿರುದ್ಧ 53 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ........







