ಇಂಡೋನೇಷ್ಯಾ ಓಪನ್: ಸೈನಾ ಶುಭಾರಂಭ

ಜಕಾರ್ತ, ಜೂ.13: ಥಾಯ್ಲೆಂಡ್‌ನ ರಚನೊಕ್ ಇಂತನಾನ್‌ರನ್ನು ಮಣಿಸಿದ ಮೂರು ಬಾರಿಯ ಚಾಂಪಿಯನ್ ಸೈನಾ ನೆಹ್ವಾಲ್ ಮಂಗಳವಾರ ಇಲ್ಲಿ ಆರಂಭವಾದ ಇಂಡೋನೇಷ್ಯ ಓಪನ್ ಸೂಪರ್ ಸರಣಿಯಲ್ಲಿ ಶುಭಾರಂಭ ಮಾಡಿದ್ದಾರೆ.
ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ ಅವರು ಮಾಜಿ ವಿಶ್ವ ಚಾಂಪಿಯನ್ ರಚನೊಕ್‌ರನ್ನು 17-21, 21-18, 21-12 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ. ರಚನೊಕ್ ವಿರುದ್ಧ 7-5 ಹೆಡ್-ಟು-ಹೆಡ್ ದಾಖಲೆ ಹೊಂದಿದ್ದ ಸೈನಾ ಇತ್ತೀಚೆಗೆ ಏಳು ವರ್ಷಗಳ ಬಳಿಕ ಮೊದಲ ಬಾರಿ ಅಗ್ರ-10ರಿಂದ ಹೊರಗುಳಿದಿದ್ದರು.
ಸೈನಾ ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್‌ನ ಇನ್ನೊಬ್ಬ ಆಟಗಾರ್ತಿ ನಿಚನಾನ್ ಜಿಂದಪಾಲ್‌ರನ್ನು ಎದುರಿಸಲಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ತೈ ಝು ಯಿಂಗ್‌ರನ್ನು ಎದುರಿಸುವ ಸಾಧ್ಯತೆಯಿದೆ.
ಮಿಶ್ರ ಡಬಲ್ಸ್ ಪಂದ್ಯದಲ್ಲಿ ಸುಮೀತ್ ರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಇಂಡೋನೇಷ್ಯದ ಇರ್ಫಾನ್ ಫದಿಲ್ಹಾ ಹಾಗೂ ವೆನಿ ಅಂಗ್ರೈನಿ ವಿರುದ್ಧ 12-21, 9-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.





