ಮಂಗಳೂರು ವಿವಿ ಸಂಧ್ಯಾ ಕಾಲೇಜಿನಲ್ಲಿ ಜರ್ಮನ್-ಫ್ರೆಂಚ್ ಭಾಷಾ ಡಿಪ್ಲೊಮಾ ಕೋಸ್

ಮಂಗಳೂರು, ಜೂ.13: ಮಂಗಳೂರು ವಿಶ್ವ ವಿದ್ಯಾನಿಲಯದ ಅಧೀನದಲ್ಲಿರುವ ನಗರದ ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜನಲ್ಲಿ ಸಂಜೆ ಗಂಟೆ 6 ರಿಂದ 8ರ ವರೆಗೆ ಪ್ರಥಮ ಹಂತದ ಜರ್ಮನ್ ಹಾಗೂ ಫ್ರೆಂಚ್ ಭಾಷೆಗಳಲ್ಲಿ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸುಗಳನ್ನು ಪ್ರಾರಂಭಿಸಲಾಗಿದೆ.
ಪ್ರಥಮ ಬ್ಯಾಚ್ ವಿದ್ಯಾರ್ಥಿಗಳು ಜರ್ಮನ್ ಹಾಗೂ ಫ್ರೆಂಚ್ ಭಾಷೆಗಳಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದಿರುತ್ತಾರೆ. ಈ ಕೋರ್ಸುಗಳನ್ನು ಪಡೆದಿರುವ ಪದವೀಧರರಿಗೆ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉತ್ತಮ ಅವಕಾಶಗಳಿರುವುದರಿಂದ ನಗರದ ಸುತ್ತಮುತ್ತಲಿನ ಪಿ.ಯು.ಸಿ., ಇಂಜಿನಿಯರಿಂಗ್, ಬಿ.ಕಾಂ., ಬಿ.ಎ., ಬಿಎಡ್, ಎಂಬಿಎ, ಸಿಎ, ಎಂಎ. ಎಂಎಡ್, ಪದವಿ ಓದುತ್ತಿರುವ ವಿದ್ಯಾರ್ಥಿಗಳು, ವ್ಯವಹಾರ/ವ್ಯಾಪಾರ ಅಥವಾ ಕಾರ್ಪೊರೇಟ್/ಮಾರ್ಕೆಟಿಂಗ್ ಉದ್ಯಮದಲ್ಲಿ ತೊಡಗಿಕೊಂಡಿರುವಂತವರು ಸಂಜೆ ತರಗತಿಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ನಗರದ ವಿವಿ ಕಾಲೇಜಿನ ಶಿವರಾಮಕಾರಂತ ಸಭಾಭವನದಲ್ಲಿ ಜೂ.20ರಂದು ನಡೆಯಲಿರುವ ಮಂಗಳೂರು ವಿಶ್ವ ವಿದ್ಯಾನಿಲಯದ ‘ಓಪನ್ ಹೌಸ್ 2017’ ಕಾರ್ಯಕ್ರಮದ ಮೂಲಕ ವಿವಿ ಕಾಲೇಜಿನ ಹಲವು ಸ್ನಾತಕೋತ್ತರ ಕೋರ್ಸುಗಳ ಪರಿಚಯದೊಂದಿಗೆ ಜರ್ಮನ್ ಹಾಗೂ ಫ್ರೆಂಚ್ ಭಾಷೆಗಳ ಡಿಪ್ಲೊಮಾ ಕೋರ್ಸುಗಳಿಗೆ ಸಂಬಂಧಿಸಿ ಮಾಹಿತಿ ಹಾಗೂ ಅರ್ಜಿ ಫಾರಂಗಳನ್ನು ನೀಡಲಾಗುವುದು.
ಅರ್ಜಿ ಸಲ್ಲಿಸಲು ಜು.5 ಕೊನೆಯ ದಿನಾಂಕವಾಗಿದ್ದು, ವಿವರಗಳಿಗೆ ಕಾಲೇಜು ಕಚೇರಿಯನ್ನು (ದೂ.ಸಂ: 0824-2424608/ಮೊ.ಸಂ: 9449333919) ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
*ಬೆಳೆಯುತ್ತಿರುವ ಪ್ರವಾಸೋದ್ಯಮ ಹಾಗೂ ಜಾಗತೀಕರಣದ ದಿನಗಳಲ್ಲಿ ಹಲವು ದೇಶಗಳ, ವಿವಿಧ ಜನಾಂಗಗಳ, ಭಿನ್ನ ಸಂಸ್ಕೃತಿ ಹಾಗೂ ಭಾಷೆಗಳನ್ನು ಒಳಗೊಂಡು ಸಂಸ್ಕರಣಗೊಂಡ ಭಾರತದ ಉದ್ದಗಲಕ್ಕೂ ಆಫ್ರಿಕನ್ನರು, ಫ್ರೆಂಚರು, ಮೆಕ್ಸಿಕನ್ನರು, ಜರ್ಮನ್, ಚೈನಿ, ಜಪಾನೀ ಮುಂತಾದವರು ಸಿಗುತ್ತಾರೆ. ಆದರೂ ಜರ್ಮನ್ ಹಾಗೂ ಫ್ರೆಂಚ್ ಭಾಷೆಗಳ ಪ್ರಖರ ಖ್ಯಾತಿಯನ್ನು ಸ್ಪಾನಿಷ್ ಅಥವಾ ಕೊರಿಯನ್ ಭಾಷೆಗಳು ಇನ್ನೂ ಗಳಿಸಿಕೊಂಡಿಲ್ಲ. ಪಾಶ್ಚಿಮಾತ್ಯ ರಾಷ್ಟ್ರಗಳ ನಡುವೆ ಭಾರತದ ಸಂಬಂಧ ಎಷ್ಟೇ ಗಟ್ಟಿ ಇದ್ದರೂ ಅದು ಭಾಷೆಗಳೊಡನೆ ಏಕೆ ಬೆಸೆದಿಲ್ಲ? ಅನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಭಾರತೀಯರು ಚೈನೀಸ್ ಅಥವಾ ಜಪಾನೀ ಭಾಷೆಗಳಿಗಿಂತಲೂ ಹೆಚ್ಚಾಗಿ ಫ್ರೆಂಚ್ ಅಥವಾ ಜರ್ಮನ್ ಭಾಷೆಯನ್ನು ಸುಲಭವಾಗಿ ಕಲಿತುಕೊಳ್ಳುವಲ್ಲಿ ಯುರೋಪಿ ಅಥವಾ ಬ್ರಿಟಿಷ್ ಹಾಗೂ ಪೋರ್ಚುಗೀಸರ ವಸಾಹತುಶಾ ವ್ಯವಸ್ಥೆ ಬಹಳ ದೀರ್ಘಕಾಲದವರೆಗೆ ನೆಲೆಯೂರಿದ್ದು ದೊಡ್ಡ ಕಾರಣವೆನಿಸುತ್ತದೆ. ಈ ಕಾರಣಗಳಿಂದಾಗಿ ಐತಿಹಾಸಿಕವಾಗಿ ಪಾಶ್ಚಿಮಾತ್ಯ ಏಷ್ಯಾಗಿಂತಲೂ ಜರ್ಮನ್ ಹಾಗೂ ಫ್ರಾನ್ಸ್ ದೇಶಗಳತ್ತಲೇ ಭಾರತೀಯರ ಹೆಜ್ಜೆ ಸಾಗುತ್ತದೆ.
ವಾಸ್ತವವಾಗಿ ಇಂಗ್ಲಿಷ್ ಕೂಡಾ ಜರ್ಮನಿ ಭಾಷೆ. ಬಹುಮನಿಯರಂತೆ, ಪರ್ಶಿಯನ್ನರಂತೆ, ಆಂಗ್ಲೋ - ಸೆಕ್ಸನರು ಕೂಡಾ ಜರ್ಮನಿ ಇಂಗ್ಲೀಷ್ ಬಳಸುತ್ತಾರೆ. ಹಾಗಾಗಿ ಜರ್ಮನಿ ವ್ಯಾಕರಣವೂ ಇಂಗ್ಲಿಷ್ ಭಾಷೆಗೆ ಬಹಳಷ್ಟು ಸಾಮ್ಯತೆ ಹಾಗೂ ಸಾಮೀಪ್ಯತೆಯನ್ನು ಹೊಂದಿದೆ. ಹಾಗಾಗಿ ಕಲಿಕೆ ಕಷ್ಟವಲ್ಲ ಎನ್ನುವುದು ಸಂಘಟಕರ ಅಭಿಮತ.
ಇನ್ನು ಈ ಎರಡೂ ಭಾಷೆಗಳನ್ನು ಒಟ್ಟಿಗೆ ಕಲಿಯಬಹುದೇ? ಅನ್ನುವ ಪ್ರಶ್ನೆ ಕೇಳಿ ಬರುತ್ತಿದೆ. ಆತ್ಮವಿಶ್ವಾಸವಿದ್ದರೆ ಎರಡಲ್ಲ ಮೂರ್ನಾಲ್ಕು ಭಾಷೆಯನ್ನು ಒಟ್ಟಿಗೆ ಕಲಿಯಬಹುದು. ಈ ಕಾರಣಗಳಿಂದಾಗಿ ಪ್ರತಿಯೊಂದು ದೇಶದ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವ ವಿದ್ಯಾನಿಲಯಗಳೂ ಕೂಡಾ ತಮ್ಮ ವ್ಯವಸ್ಥೆಯಲ್ಲಿ ಹಲವು ಭಾಷೆಗಳ ಪರಿಚಯ, ಮಾಹಿತಿ ಹಾಗೂ ಜ್ಞಾನವನ್ನು ನೀಡುವ ನೈತಿಕ ಜವಬ್ದಾರಿಯನ್ನು ಹೊತ್ತುಕೊಂಡಿರುವುದು ಸುಳ್ಳಲ್ಲ.







