ಮದ್ಯದಂಗಡಿಗೆ ಪರವಾನಿಗೆ ನೀಡದಿರಲು ಆಗ್ರಹಿಸಿ ಧರಣಿ

ಮಂಗಳೂರು, ಜೂ.13: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಇಕ್ಕಡೆಗಳಲ್ಲಿರುವ ಮದ್ಯದ ಅಂಗಡಿಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ ಕೂಡ ನಗರದ ಪಂಪ್‌ವೆಲ್‌ನಿಂದ ಪಡೀಲ್‌ವರೆಗೆ 5 ಮದ್ಯದಂಗಡಿ ಇದೆ. ಅಲ್ಲದೆ ಹೊಸತಾಗಿ 4 ಮದ್ಯದ ಅಂಗಡಿಗೆ ಪರವಾನಿಗೆ ನೀಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಎಲ್ಲ ಮದ್ಯದಂಗಡಿಗಳನ್ನು ಮುಚ್ಚಬೇಕು ಮತ್ತು ಹೊಸ ಪರವಾನಿಗೆ ನೀಡಬಾರದು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ದ.ಕ. ಮತ್ತು ಉಡುಪಿ ಜಿಲ್ಲೆ ಹಾಗು ಮಂಗಳೂರು ತಾಲೂಕು ಘಟಕ, ಪಡೀಲ್ ಬಜಾಲ್ ನಾಗರಿಕ ಸಮಿತಿಯು ಮಂಗಳವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿತು.
ಪಂಪ್‌ವೆಲ್‌ನಿಂದ ಪಡೀಲ್ ತನಕ ಶಾಲಾ ಕಾಲೇಜುಗಳು, ಪ್ರಾರ್ಥನಾ ಮಂದಿರಗಳು, ಮನೆಗಳಿವೆ. ಮದ್ಯದಂಗಡಿಯಿಂದ ಇಲ್ಲಿನ ನಾಗರಿಕರಿಗೆ ತೊಂದರೆಯಾಗುತ್ತಿವೆ. ಸಾರ್ವಜನಿಕರ ಸ್ವಾಸ್ಥ ಕಾಪಾಡುವ ನಿಟ್ಟಿನಿಂದ ಈ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಧರಣಿಯಲ್ಲಿ ಕಸಾಮ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ವೇದಿಕೆಯ ಜಿಲ್ಲಾಧ್ಯಕ್ಷ ಮುಹಮ್ಮದ್ ಇಸ್ಮಾಯೀಲ್, ತಾಲೂಕು ಅಧ್ಯಕ್ಷ ಮಹಾಬಲ ಚೌಟ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಅಧಿಕಾರಿ ಉಮರಬ್ಬ, ವೇದಿಕೆಯ ಪದಾಧಿಕಾರಿಗಳಾದ ಉದಯ ಆಳ್ವ, ಸರೋಜಿನಿ ಸುವರ್ಣ, ವೇಣು ವಿನೋದ್ ಶೆಟ್ಟಿ, ಆಲ್ವಿನ್ ಡಿಸೋಜ, ಸದಾಶಿವ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.







