ಉಪ್ಪಿನಂಗಡಿ:ಜೂ.17 ರಿಂದ ‘ಯಕ್ಷ ಸಂಭ್ರಮ- 2017’
ಉಪ್ಪಿನಂಗಡಿ: ಯಕ್ಷ ಸಂಗಮ ಉಪ್ಪಿನಂಗಡಿ ಇದರ ವತಿಯಿಂದ ಜೂ.17 ಮತ್ತು 18ರಂದು ಉಪ್ಪಿನಂಗಡಿಯಲ್ಲಿ ‘ಯಕ್ಷ ಸಂಭ್ರಮ- 2017’ ಯಕ್ಷ ಛಾಯಾಚಿತ್ರ ಪ್ರದರ್ಶನ, ಸನ್ಮಾನ ಸಮಾರಂಭ, ಅಮೋಘ ಯಕ್ಷಗಾನ ಬಯಲಾಟ ಕಾರ್ಯಕ್ರಮಗಳು ನಡೆಯಲಿವೆ.
ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರದಲ್ಲಿ ಜೂ.17ರಂದು ಸಂಜೆ 6:15ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಜೂ.18ರ ಬೆಳಗ್ಗೆ 6:30ಕ್ಕೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಯಕ್ಷಗಾನ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆಯಲ್ಲಿ ನಟ್ಟಿಬೈಲ್‌ನ ಶ್ರೀ ರಾಮ ಶಾಲೆ ಸಂಚಾಲಕ ಯು.ಜಿ.ರಾಧಾ, ಪತ್ರಿಕಾ ಛಾಯಾಗ್ರಾಹಕ ಅಪುಳ್ ಆಳ್ವ ಇರಾ ಭಾಗವಹಿಸಲಿದ್ದಾರೆ.
6:30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ಕಮಲಾದೇವಿ ಪ್ರಸಾದ ಅಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೆಎಂಸಿಯ ಡಾ. ಪದ್ಮನಾಭ ಕಾಮತ್, ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ಕರ್ಣಾಟಕ ಬ್ಯಾಂಕ್‌ನ ಉಪ್ಪಿನಂಗಡಿ ಶಾಖೆಯ ಮೆನೇಜರ್ ಗಣಪತಿ ಭಟ್ ಸಿ., ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ. ರಾಜಾರಾಮ್ ಭಟ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅಲಿಮಾರ ರಘುನಾಥ ರೈ, ಕಲಾ ಪೋಷಕ ಆರ್. ಕೆ. ಬೆಳ್ಳಾರೆ ಭಾಗವಹಿಸಲಿದ್ದಾರೆ.
ಈ ಸಂದರ್ಭ ಹಿರಿಯ ಯಕ್ಷಗಾನ ಹಿಮ್ಮೇಳವಾದಕರಾದ ಲಕ್ಷ್ಮೀಶ ಅಮ್ಮಣ್ಣಾಯ, ಕಟೀಲು ಮೇಳದ ರಂಗಸಹಾಯಕರಾದ ಸಂಜೀವ ಕುಲಾಲ್ ಹಾಗೂ ವಿಶ್ವನಾಥ ಶೆಟ್ಟಿ ಪೆರ್ನೆ ಅವರನ್ನು ಸನ್ಮಾನಿಸಲಾಗುತ್ತದೆ.
ರಾತ್ರಿ 8ರಿಂದ ಯಕ್ಷಗಾನ ಪೂರ್ವರಂಗ ನಡೆಯಲಿದ್ದು, 9ರಿಂದ ‘ಕೃಷ್ಣ ಲೀಲೆ- ಕಂಸವಧೆ’, ‘ಶ್ರೀ ರಾಮ ದರ್ಶನಂ’ , ‘ಶಶಿಪ್ರಭಾ ಪರಿಣಯ’, ‘ಕದಂಬ ಕೌಶಿಕೆ’ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.







