ರೈತರ ಬೆಳೆ ಹಾನಿಗೆ 1530 ಕೋಟಿ ಬಿಡುಗಡೆ: ಕಾಗೋಡು ತಿಮ್ಮಪ್ಪ

ಬೆಂಗಳೂರು, ಜೂ.14: ಮುಂಗಾರು ಹಂಗಾಮಿನ ಬೆಳೆ ಹಾನಿಗೆ 22,99,757 ಲಕ್ಷ ರೈತರಿಗೆ ಈಗಾಗಲೇ 1530 ಕೋಟಿ ರೂ.ಬಿಡುಗಡೆ ಮಾಡಲಾಗಿದ್ದು, ಉಳಿದ 70 ಸಾವಿರ ರೈತರಿಗೆ ಹಣ ಬಿಡುಗಡೆ ಮಾಡಬೇಕಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಬುಧವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಟಿ.ಎ.ಶರವಣ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ 139 ತಾಲೂಕುಗಳನ್ನು ಹಾಗೂ ಹಿಂಗಾರು ಹಂಗಾಮಿನಲ್ಲಿ 160 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ಆ ಪೈಕಿ ಮುಂಗಾರು ಹಂಗಾಮಿನ ಬೆಳೆ ಹಾನಿಗೆ 1530 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಕೇಂದ್ರ ಸರಕಾರ ಮುಂಗಾರು ಹಂಗಾಮಿನ ಬರ ಪರಿಹಾರಕ್ಕಾಗಿ 1685.52 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಆರು ತಿಂಗಳಾಯಿತು. ಆದರೂ ರಾಜ್ಯ ಸರಕಾರ ಇಲ್ಲಿಯವರೆಗೆ ಯಾಕೆ ರೈತರಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಗೋಡು ತಿಮ್ಮಪ್ಪ ಅವರು ರೈತರ ಖಾತೆಗಳಿಗೆ ಆಧಾರ ಲಿಂಕ್ ಮಾಡುತ್ತಿರುವುದರಿಂದ ಬೆಳೆ ಪರಿಹಾರ ನೀಡುವುದು ತಡವಾಗಿದೆ. ಹೀಗಾಗಿ, ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಆದಷ್ಟು ಬೇಗ ರೈತರಿಗೆ ಬೆಳೆ ಪರಿಹಾರವನ್ನು ನೀಡಲಾಗುವುದು ಎಂದು ಹೇಳಿದರು.







