ಕಾರು ಪಾರ್ಕಿಂಗ್ ಮಾಡಲು ಸಮಯ ವ್ಯರ್ಥವಾಗುತ್ತದೆಂದು ಈತ ಮಾಡಿದ್ದೇನು ಗೊತ್ತೇ?

ಚೀನಾ, ಜೂ.14: ಅಂಗಡಿಯ ಮುಂದೆ ಕಾರು ಪಾರ್ಕಿಂಗ್ ಮಾಡಲು ಉದಾಸೀನ ತೋರಿದ ಗ್ರಾಹಕನೋರ್ವನ ಸಾಹಸ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚೀನಾದ ಝೆಂಜಿಯಾಂಗ್ ಪ್ರಾಂತ್ಯದಲ್ಲಿ ಘಟನೆ ನಡೆದಿದ್ದು, ಇಲ್ಲಿನ ಸ್ಟೋರೊಂದಕ್ಕೆ ಆಗಮಿಸಿದ ಗ್ರಾಹಕನೋರ್ವ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸುವುದು ಸಮಯ ವ್ಯರ್ಥವೆಂದುಕೊಂಡು ಅಂಗಡಿಯೊಳಕ್ಕೆ ಕಾರನ್ನು ನುಗ್ಗಿಸಿದ್ದಾನೆ. ತನ್ನ ಅಂಗಡಿಯೊಳಕ್ಕೆ ಕಾರೊಂದು ಬರುತ್ತಿರುವುದನ್ನು ಕಂಡು ಹೌಹಾರಿದ ಮಾಲಕ ಗಾಬರಿಗೊಂಡಿದ್ದಾನೆ. ಕೂಡಲೇ ಕಾರಿನ ಬಳಿ ದೌಡಾಯಿಸಿದ್ದು, ಏನು ಬೇಕು ಎಂದು ಪ್ರಶ್ನಿಸಿದ್ದಾನೆ,
ಈ ಎಲ್ಲಾ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಆದರೆ ಇನ್ನೊಂದು ಅಚ್ಚರಿಯ ವಿಷಯವೆಂದರೆ ಅಷ್ಟೊಂದು ತುರ್ತಿನಲ್ಲಿ ಅಂಗಡಿಯೊಳಕ್ಕೆ ಕಾರು ನುಗ್ಗಿಸಿದ ಚಾಲಕ ಖರೀದಿಸಿದ್ದು, ಅವಶ್ಯಕ ಅಥವಾ ತುರ್ತಿನ ಅಗತ್ಯದಂತಿರುವ ವಸ್ತುಗಳನ್ನಲ್ಲ ಬದಲಾಗಿ ಚಿಪ್ಸ್ ಪ್ಯಾಕ್ ಮತ್ತು ಒಂದು ಬಾಟಲ್ ಜ್ಯೂಸ್!.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕಾರು ಚಾಲಕನ ವರ್ತನೆಯ ಬಗ್ಗೆ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.







