ತಮಿಳುನಾಡು ವಿಧಾನಸಭೆಯಿಂದ ಡಿಎಂಕೆ ಸದಸ್ಯರ ಸಾಮೂಹಿಕ ತೆರವು

ಚೆನ್ನೈ,ಜೂ.14: ಬುಧವಾರ ತಮಿಳುನಾಡು ವಿಧಾನಸಭೆಯಲ್ಲಿ ಗದ್ದಲವೆಬ್ಬಿಸಿ ಕಲಾಪಕ್ಕೆ ತಡೆಯೊಡ್ಡಿದ್ದ ಪ್ರತಿಪಕ್ಷ ಡಿಎಂಕೆಯ ನಾಯಕ ಎಂಕೆ.ಸ್ಟಾಲಿನ್ ಮತ್ತು ಸದಸ್ಯರನ್ನು ಸ್ಪೀಕರ್ ಆದೇಶದಂತೆ ಸದನದಿಂದ ಹೊರಹಾಕಲಾಯಿತು.
2017,ಫೆಬ್ರವರಿಯಲ್ಲಿ ವಿಧಾನಸಭೆಯಲ್ಲಿ ವಿಶ್ವಾಸಮತಕ್ಕೆ ಮುನ್ನ ಎಐಎಡಿಎಂಕೆ ಶಾಸಕರು ಕೂವತ್ತೂರು ರೆಸಾರ್ಟ್‌ನಲ್ಲಿ ತಂಗಿದ್ದ ಸಂದರ್ಭ ವಿ.ಕೆ.ಶಶಿಕಲಾ ಬಣವನ್ನು ಬೆಂಬಲಿಸುವಂತೆ ಅವರಿಗೆ ಭಾರೀ ಹಣದ ಕೊಡುಗೆಯನ್ನು ನೀಡಲಾಗಿತ್ತು ಎಂದು ಟಿವಿ ಚಾನೆಲ್ ಮುಂದೆ ಒಪ್ಪಿಕೊಂಡಿರುವ ಇಬ್ಬರು ಎಐಎಡಿಎಂಕೆ ಶಾಸಕರ ವಿಷಯವನ್ನು ಪ್ರಸ್ತಾಪಿಸಲು ಡಿಎಂಕೆ ಶಾಸಕರು ಪ್ರಯತ್ನಿಸಿದ್ದರು. ಆದರೆ ಅವರ ಕೋರಿಕೆಯನ್ನು ತಿರಸ್ಕರಿಸಿದ ಸ್ಪೀಕರ್ ಧನಪಾಲ್ ಅವರು, ವಿಷಯವು ನ್ಯಾಯಾಲಯದಲ್ಲಿರುವುದರಿಂದ ಸದನದಲ್ಲಿ ಅದನ್ನು ಚರ್ಚಿಸುವಂತಿಲ್ಲ ಎಂದು ಹೇಳಿದರು.
ಇದನ್ನೊಪ್ಪದ ಡಿಎಂಕೆ ಸದಸ್ಯರು ನಿರಂತರವಾಗಿ ಘೋಷಣೆಗಳನ್ನು ಕೂಗುತ್ತ ಅಧಿವೇಶನಕ್ಕೆ ವ್ಯತ್ಯಯವನ್ನುಂಟು ಮಾಡಿದಾಗ ಅವರನ್ನು ತಕ್ಷಣ ಸದನದಿಂದ ತೆರವುಗೊಳಿ ಸುವಂತೆ ಸ್ಪೀಕರ್ ಆದೇಶಿಸಿದರು.
ಹೀಗೆ ತೆರುವುಗೊಳಿಸಲ್ಪಟ್ಟ ಬೆನ್ನಲ್ಲೇ ಸ್ಟಾಲಿನ್ ಅವರು ತನ್ನ ಪಕ್ಷದ ಶಾಸಕರೊಂದಿಗೆ ೇರಿಕೊಂಡು ರಸ್ತೆಯನ್ನು ತಡೆದು ಪ್ರತಿಭಟನೆಯನ್ನು ನಡೆಸಿದರು.
ಶಶಿಕಲಾ ಬಣವನ್ನು ಬೆಂಬಲಿಸಿದರೆ 2ರಿಂದ 10 ಕೋ.ರೂ. ಮತ್ತು ಚಿನ್ನ ನೀಡುವುದಾಗಿ ಎಐಎಡಿಎಂಕೆ ಶಾಸಕರ ಮುಂದೆ ಕೊಡುಗೆಯನ್ನಿರಿಸಲಾಗಿತ್ತು ಎಂದು ಶಾಸಕರಾದ ಒ.ಪನ್ನೀರಸೆಲ್ವಂ ಬಣದ ಎಸ್.ಎಸ್.ಶರವಣನ್ ಮತ್ತು ಎಡಿಪ್ಪಾಡಿ ಪಳನಿಸ್ವಾಮಿ ಬಣದ ಆರ್. ಕನಕರಾಜ್ ಅವರು ಒಪ್ಪಿಕೊಂಡಿದ್ದ ವೀಡಿಯೊ ತುಣುಕುಗಳನ್ನು ಎರಡು ಖಾಸಗಿ ಚಾನೆಲ್‌ಗಳು ಪ್ರಸಾರ ಮಾಡಿದ್ದವು.
ಈ ಶಾಸಕರು ಮಾಡಿರುವ ಆರೋಪದ ಬಗ್ಗೆ ಸಿಬಿಐ ತನಿಖೆಯನ್ನು ಕೋರಿ ಡಿಎಂಕೆ ಮಂಗಳವಾರ ಮದ್ರಾಸ್ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ.







