ದಲಿತರ ಮೇಲೆ ದೌರ್ಜನ್ಯ: ಕ್ರಮ ಜರುಗಿಸಲು ಡಿಎಸ್‌ಎಸ್ ಒತ್ತಾಯ

ಚಿಕ್ಕಮಗಳೂರು, ಜೂ. 14: ಅಂಬಳೆ ಹೋಬಳಿ ಬಳಿಯ ಹಾದಿಹಳ್ಳಿ ಗ್ರಾಮದ ದಲಿತರ ಮೇಲೆ ದೌರ್ಜನ್ಯ ನಡೆಸಿ ಬಹಿಷ್ಕಾರ ಮಾಡಿರುವ ಸವರ್ಣೀಯರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಛೇರಿಯಲ್ಲಿ ಉಪವಿಭಾಗಾಧಿಕಾರಿ ಸಂಗನಪ್ಪರಿಗೆ ಬುಧವಾರ ಮನವಿ ಸಲ್ಲಿಸಿದರು.
ಎ.29ರಂದು ಹಾದಿಹಳ್ಳಿ ದಲಿತ ಮಹಿಳೆಯರ ಮೇಲೆ ಸತೀಶ್ ಎಂಬಾತ ದಲಿತರಾದ ಅಶೋಕ್ ಎಂಬವರ ಪತ್ನಿ ತಾರ ಎಂಬ ಮಹಿಳೆ ಮೇಲೆ ದೌರ್ಜನ್ಯ ಎಸಗಿದ್ದರು. ದಲಿತ ಕಾಲೋನಿಗೆ ನುಗ್ಗಿ ತಾರಾ ರನ್ನು ಅವಾಚ್ಯ ಶಭ್ದದಿಂದ ಜಾತಿ ಹೆಸರಿನಲ್ಲಿ ನಿಂದಿಸಿ ಕಲ್ಲು ಮತ್ತು ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದರು. ಈ ಸಮಯದಲ್ಲಿ ದಲಿತರಾದ ಕೃಷ್ಣಯ್ಯ ಮತ್ತು ನಾಗಯ್ಯ ಎಂಬವರ ಮೇಲೂ ಹಲ್ಲೆ ನಡೆದಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಅದಾದ ಮರುದಿನ ಎ.30ರಂದು ಕೂಲಿ ಕೆಲಸಕ್ಕೆ ತೆರಳುತ್ತಿದ್ದ ದಲಿತ ಮಹಿಳೆಯರನ್ನು ತಡೆದು ನಿಮಗೆ ಹಾದಿಹಳ್ಳಿ ಸವರ್ಣೀಯರ ಊರೊಳಗೆ ತೆರಳದಂತೆ ಬಹಿಷ್ಕಾರ ಹಾಕಿದ್ದಾಗಿ ಗ್ರಾಮದ ಕೆಲವು ಸವರ್ಣೀಯರು ಕೂಗಿ ಹೇಳಿದ್ದರು. ದಲಿತ ಮಹಿಳೆಯರು ಕೂಲಿ ಕೆಲಸಗಳಿಗೆ ತೆರಳುತತಿದ್ದ ವ್ಯಾನ್ ಮಾಲಿಕ ನಿಕಿಲ್ ತುರಗುಣ ಎಂಬವರಿಗೆ ಫೋನ್ ಮಾಡಿ ದಲಿತರನ್ನು ಕರೆದೊಯ್ಯದಂತೆ ಎಚ್ಚರಿಕೆ ನೀಡಿ ಹೋಗುತ್ತಿದ್ದ ವ್ಯಾನನ್ನು ತಡೆದು ನಿಲ್ಲಿಸಿದ್ದರು ಎಂದು ಆರೋಪಿಸಿದ್ದಾರೆ.
ಅಲ್ಲದೆ ಊರಲ್ಲಿರುವ ಎರಡು ಹಾಲಿನ ಡೈರಿಗಳಲ್ಲಿ ದಲಿತರಿಗೆ ಹಾಲು ಕೊಡುತ್ತಿಲ್ಲ. ಈ ವಿಷಯಕ್ಕೆ ಸಂಬಂಧಿಸಿ ಘಟನೆಯಲ್ಲಿ ಪಾತ್ರ ಉಳ್ಳ ಸವರ್ಣೀಯರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಕೆ ವೇಳೆ ಡಿಎಸ್‌ಎಸ್ ಸಂಚಾಲಕ ಜೆ.ಪಿ.ರಾಜರತ್ನಂ, ತಾರ, ಅಶೋಕ್ ಮತ್ತಿತರರಿದ್ದರು.







