ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾಗೊಳಿಸಲು ರೈತ ಸಂಘದ ಒತ್ತಾಯ

ಚಿಕ್ಕಮಗಳೂರು, ಜೂ.14: ರಾಜ್ಯದಲ್ಲಿ ರೈತರು ತೀವ್ರ ಬರಗಾಲದಿಂದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ವಿವಿಧ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ಮನ್ನಾಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬುಧವಾರ ಉಪವಿಭಾಗಾಧಿಕಾರಿ ಸಂಗನಪ್ಪ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇಂದು ಬರಗಾಲದಿಂದ ರಾಜ್ಯದ ಎಲ್ಲೆಡೆಯೂ ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲಾ ಕುಗ್ರಾಮದಲ್ಲಿ ಬಡವರು, ಕೂಲಿ ಕಾರ್ಮಿಕರು, ರೈತರು ಕೆಲಸ ಇಲ್ಲದೆ ಗುಳೆ ಹೋಗುವಂತಾಗಿದೆ. ಬಹುತೇಕ ಬಡವರು ಆತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕೃಷಿಯಲ್ಲಿಯೇ ಉಳಿದಿರುವ ಅರ್ದದಷ್ಟು ಜನರು ತ್ಯಾಗ ಮನೋಭಾಗದಿಂದ ದೇಶದ ಜನರ ಒಳಿತಿಗಾಗಿ ಆಹಾರ ಪದಾರ್ಥಗಳನ್ನು ಬೆಳೆಯುತ್ತಿದ್ದಾರೆ. ಆದರೆ ಅವರು ಇಂದು ಆತಂತ್ರ ಪರಿಸ್ಥಿತಿಯಲ್ಲಿರುವುದನ್ನು ಗಂಭೀರವಾಗಿ ಗಮನಿಸಬೇಕು ಎಂದು ಒತ್ತಾಯಿಸಿದ್ದಾರೆ.
ರೈತರು ಬೆಳೆ ಸರಿಯಾಗಿ ಬಾರದಿರುವಾಗ ಸಂಕಷ್ಟದಲ್ಲಿ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆಯಂತಹ ದಾರಿ ಹಿಡಿಯುತ್ತಿದ್ದಾರೆ. ಸರಕಾರದ ನಕಲಿ ಯೋಜನೆಗಳು, ಜನಪ್ರತಿನಿಧಿಗಳ ಹಾಗೂ ರಾಜಕೀಯದವರ ಮೊಸಳೆ ಕಣ್ಣೀರುಗಳು ರೈತರನ್ನು ಕಾಪಾಡಲಾರದು. ಇಂತಹ ಸಂಕಷ್ಟದಲ್ಲಿ ಸತತ ಮೂರನೇ ವರ್ಷದಲ್ಲಿ ಬರಗಾಲವನ್ನು ಎದುರಿಸುತ್ತಿರುವ ರೈತರು ಬದುಕುವುದು ದುಸ್ತರವಾಗಿದೆ. ಕೆಲವೆಡೆ ಮಳೆ ಇಲ್ಲದೆ ಆಣೆಕಟ್ಟುಗಳಲ್ಲೂ ನೀರಿಲ್ಲದೆ ಬೆಳೆ ಕಣ್ಣಮುಂದೆ ಒಣಗುತ್ತಿರುವುದನ್ನು ಕಂಡು ಮನನೊಂ ದು ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ. ಆದ್ದರಿಂದ ತಕ್ಷಣ ರೈತರ ಸಾಲ ಮನ್ನಾ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಮಯದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎ.ಮಂಜುನಾಥ, ಮುಕಂಡರಾದ ಕೆ.ಕೆ.ಕೃಷ್ಣೇಗೌಡ, ಎಂ.ಸಿ.ಬಸವರಾಜ್ ಮತ್ತಿತರರಿದ್ದರು.







