ಅಕ್ರಮ ಕಲ್ಲು ಗಣಿಗಾರಿಕೆ: ಪ್ರಭಾವಿಗಳ ಮೇಲೆ ಕ್ರಮ ಜರುಗಿಸದಿದ್ದರೆ ಪ್ರತಿಭಟನೆ: ದೇವರಾಜ್ ಎಚ್ಚರಿಕೆ

ಚಿಕ್ಕಮಗಳೂರು, ಜೂ.14 : ಕಾನೂನು ದುರ್ಬಳಕೆಯೊಂದಿಗೆ ಸುರಕ್ಷಿತ ವಲಯದಲ್ಲಿ ಜಿಲ್ಲೆಯ ಪ್ರಭಾವಿಗಳಿಬ್ಬರೂ ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ತಪ್ಪಿತಸ್ಥರ ಮೇಲೆ ಒಂದು ವಾರದ ಗಡುವಿನೊಳಗೆ ಕಠಿಣ ಕಾನೂನುಕ್ರಮ ಜರುಗಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಹೆಚ್.ದೇವರಾಜ್ ಎಚ್ಚರಿಸಿದ್ದಾರೆ.
ಅವರು ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಮಗಳೂರು ತಾಲ್ಲೂಕಿನ ನಾಗರಹಳ್ಳಿ ಸ.ನಂ.167ರಲ್ಲಿರುವ ಜಮೀನನ್ನು ಸುರಕ್ಷಿತ ವಲಯ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. ಈ ಸುರಕ್ಷಿತ ವಲಯಗಳಲ್ಲಿ ಜಿಲ್ಲಾಡಳಿತ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ಕಲ್ಲಿನ ಕ್ರಷರ್ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಈ ಅಕ್ರಮದಲ್ಲಿ ಈ ಹಿಂದೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಜಿಲ್ಲಾಧಿಕಾರಿ ಶೇಖರಪ್ಪನವರ ಕೊಡುಗೆಯಿದೆ ಎಂದು ಹೇಳಿದ ಅವರು, ಈ ಪ್ರಕರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಭಾಗಿಗಳಾಗಿದ್ದಾರೆ. ಕಾನೂನು ಕಾಯ್ದೆಗಳನ್ನು ಗಾಳಿಗೆ ತೂರಿ ಬಂಡೆಗಳನ್ನು ಸ್ಪೋಟಿಸುವ ಮೂಲಕ ಕ್ರಷರ್‌ಗಳನ್ನು ಅಕ್ರಮವಾಗಿ ನಡೆಸಲಾಗುತ್ತಿದೆ. ಅಕ್ರಮ ಕ್ರಷರ್‌ಗಳಿಗೆ ಅಕ್ರಮವಾಗಿಯೇ ವಿದ್ಯುತ್ ಸಂಪರ್ಕ ಪಡೆಯಲಾಗಿದೆ ಎಂದು ಆರೋಪಿಸಿದ ಅವರು ಈ ಪ್ರಕರಣದಲ್ಲಿ ಸರಕರಕ್ಕೆ ಪಾವತಿಯಾಗಬೇಕಾದ ತೆರಿಗೆ ಮತ್ತು ರಾಜಧನವನ್ನು ವಂಚಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಹಲವು ವಿವಿಧ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಟಿಯ ನಂತರ ದೇವರಾಜ್ ಉಪವಿಭಾಗಾಧಿಕಾರಿ ಸಂಗನಪ್ಪನವರಿಗೆ ಅಕ್ರಮ ಕಲ್ಲು ಗಣಿಗಾರಿಕೆ ಮಾಡುತ್ತಿರುವ ಪ್ರಭಾವಿಗಳ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲು ಒತ್ತಾಯಿಸಿ ಮನವಿ ಸಲ್ಲಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಜಮೀಲ್ ಅಹಮದ್, ಮುಖಂಡರಾದ ಹೊಲದಗದ್ದೆ ಗಿರೀಶ್ ಉಪಸ್ಥಿತರಿದ್ದರು.







