ರೈತರ ಮೇಲೆ ಗೋಲಿಬಾರ್: ಯುವ ಕಾಂಗ್ರೆಸ್ ಖಂಡನೆ

ಮಡಿಕೇರಿ ಜೂ.14: ಮಧ್ಯಪ್ರದೇಶದಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ ಹಾಗೂ ಅಲ್ಲಿನ ಸರಕಾರ ಕಾಂಗ್ರೆಸ್ ನಾಯಕರ ವಿರುದ್ಧ ತೆಗೆದುಕೊಂಡ ಕ್ರಮಗಳನ್ನು ಖಂಡಿಸುವುದಾಗಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ಎ.ಶಾಫಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಸಂತ್ರಸ್ತ ರೈತರನ್ನು ಭೇಟಿ ಮಾಡಲು ತೆರಳಿದ ಕಾಂಗ್ರೆಸ್‌ನ ರಾಷ್ಟ್ರೀಯ ಉಪಾಧ್ಯಕ್ಷರಾದ ರಾಹುಲ್ ಗಾಂಧಿ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಮೀನಾಕ್ಷಿ ನಟರಾಜನ್ ಅವರನ್ನು ಪೊಲೀಸರು ವಶಕ್ಕೆ ಪಡೆಯುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ದೇಶದ ಜನತೆಗೆ ಅಚ್ಛೇದಿನ್ ನೀಡುವುದಾಗಿ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ದೇಶದ ರೈತರ ಕೆಟ್ಟ ದಿನಗಳಿಗೆ, ಸಂಕಷ್ಟಗಳಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಅಬ್ ಕಿ ಬಾರ್ ಮೋದಿ ಸರಕಾರ್ ಎಂಬ ಘೋಷಣೆಯೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಇದೀಗ ಮಧ್ಯಪ್ರದೇಶದಲ್ಲಿ ಅಬ್ ಬಾರ್ ಗೋಲಿಬಾರ್ ಸರಕಾರ್ ಎಂಬಂತಾಗಿದೆ. ಪ್ರತಿಯೊಂದು ವಿಚಾರವನ್ನೂ ಟ್ವಿಟ್ ಮಾಡುವ ಪ್ರಧಾನಮಂತ್ರಿ ರೈತರ ಮೇಲೆ ನಡೆದ ಗೋಲಿಬಾರ್‌ನ ಬಗ್ಗೆ ಟ್ವಿಟ್ ಮಾಡುವುದನ್ನು ಮರೆತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ನಂತರ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿತು. ದುರ್ಬಲರು ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಸ್ವಲ್ಪವೂ ಕಾಳಜಿ ಇಲದ ಬಿಜೆಪಿ ಇದೀಗ ರಾಜ್ಯದ ಜನರ ಕಣ್ಣೊರೆಸುವ ತಂತ್ರವಾಗಿ ‘ಬಿಜೆಪಿ ನಡಿಗೆ ದಲಿತರ ಮನೆಗೆ’ ಎನ್ನುವ ಅಭಿಯಾನವನ್ನು ಆರಂಭಿಸಿದೆ ಎಂದು ಶಾಫಿ ಆರೋಪಿಸಿದ್ದಾರೆ.
ಪ್ರಧಾನ ಮಂತ್ರಿ ವಿದೇಶ ಪ್ರವಾಸ ಮಾಡುವುದನ್ನು ಕಡಿಮೆ ಮಾಡಿ ದೇಶದ ಪ್ರತಿಯೊಂದು ರಾಜ್ಯಕ್ಕೆ ಭೇಟಿ ನೀಡಿ ರೈತರ ಸ್ಥಿತಿಗತಿಯ ಬಗ್ಗೆ ಖುದ್ದು ಅಧ್ಯಯನ ನಡೆಸಿ ಪರಿಹಾರ ಸೂಚಿಸಲಿ ಎಂದು ಯುವ ಕಾಂಗ್ರೆಸ್ ಒತ್ತಾಯಿಸುವುದಾಗಿ ಶಾಫಿ ತಿಳಿಸಿದ್ದಾರೆ.







