ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಳ್ವಾಸ್‌ನ 14 ಕ್ರೀಡಾಪಟುಗಳು ಆಯ್ಕೆ

ಮೂಡುಬಿದಿರೆ,ಜೂ.14: ಒರಿಸ್ಸಾದ ಭುವನೇಶ್ವರದಲ್ಲಿ ಜುಲೈ 6ರಿಂದ 9ರವರೆಗೆ ಜರುಗಲಿರುವ 22ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಆಳ್ವಾಸ್‌ನ ಹಳೆ ವಿದ್ಯಾರ್ಥಿ ಒಲಿಂಪಿಯನ್ ಎಂ.ಆರ್. ಪೂವಮ್ಮ ಸಹಿತ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ 14 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿರುತ್ತಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಂಜಾಬ್‌ನ ಪಟಿಯಾಲದಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ ಭಾಗವಹಿಸಿದ್ದ ಆಳ್ವಾಸ್ ಕ್ರೀಡಾಪಟುಗಳು ಒಟ್ಟು 4 ಚಿನ್ನ, 5 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಗೆದ್ದಿದ್ದರು. ಇಲ್ಲಿನ ನಿರ್ವಹಣೆಯ ಆಧಾರದ ಮೇಲೆ ಈಗಾಗಲೇ ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ ಭಾರತೀಯ ತಂಡವನ್ನು ಪ್ರಕಟಿಸಿದ್ದು, 22ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಸಂಸ್ಥೆಯ 13 ಮಂದಿ ಕ್ರೀಡಾಪಟುಗಳು ರಾಷ್ಟ್ರವನ್ನು ಪ್ರತಿನಿಧಿಸಲಿದ್ದಾರೆ ಹಾಗೂ ಅಂತರಾಷ್ಟ್ರೀಯ ಶಾಲಾ ಕ್ರೀಡಾಕೂಟಕ್ಕೂ ಆಳ್ವಾಸ್‌ನ 1 ವಿದ್ಯಾರ್ಥಿ ಆಯ್ಕೆಯಾಗಿರುತ್ತಾರೆ ಆಯ್ಕೆಯಾದ ಕ್ರೀಡಾಪಟುಗಳು: ಅಭಿಷೇಕ್ ಶೆಟ್ಟಿ, ಎಂ.ಆರ್. ಪೂವಮ್ಮ, ಜಾಯ್‌ಲಿನ್ ಲೋಬೋ, ಸಿದ್ಧಾರ್ಥ ನಾಯಕ್, ಚೇತನ್, ನಯನ ಜೇಮ್ಸ್, ಸಂಶೀರ್, ಶೀನಾ, ಅನು ರಾಘವನ್, ಅನಾಮಿಕ, ಸಂತೋಷ್, ಜಕ್ತರ್ ಸಿಂಗ್, ಪ್ರವೀಣ್ ಮುತ್ತು ಕುಮಾರ್.
ವಿಶ್ವಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಳ್ವಾಸ್ ಸಂಸ್ಥೆಯ ಜೋತ್ಸ್ನಾ ಆಯ್ಕೆಯಾಗಿದ್ದಾರೆ. ಇವರು ಈ ಬಾರಿಯ ರಾಷ್ಟ್ರೀಯ ಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 100 ಹಾಗೂ 200ಮೀನಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಎಂ. ಆರ್. ಪೂವಮ್ಮ, ಶೀನಾ ಹಾಗೂ ಅನಾಮಿಕ ಕಜಕಿಸ್ತಾನದಲ್ಲಿ ಮುಂದಿನ ಜುಲೈನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.





