ಸರಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿದವರ ವಿರುದ್ಧ ಕ್ರಮ: ಕಾಗೋಡು ತಿಮ್ಮಪ್ಪ

ಬೆಂಗಳೂರು, ಜೂ.14: ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಹೋಬಳಿಯ ಸಿಂಗನಾಯಕನಹಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಾದಪ್ಪನಹಳ್ಳಿಯಲ್ಲಿ 18 ಎಕರೆ 38 ಗುಂಟೆ ಜಾಗಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಬುಧವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎಂ.ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಬೆಂಗಳೂರಿನಲ್ಲಿ ಸರಕಾರಿ ಜಾಗಗಳನ್ನು ಆಕ್ರಮಿಸಿಕೊಂಡು ಲೇಔಟ್‌ಗಳನ್ನು ನಿರ್ಮಿಸುವುದು. ಹಾಗೂ ಸರಕಾರಿ ಜಾಗಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ಹಾವಳಿ ಹೆಚ್ಚುತ್ತಿದೆ. ಆದರೆ, ಬೆಂಗಳೂರಿನ ಶಾಸಕರು ಸಹಕಾರ ನೀಡಿದರೆ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬಹುದು ಎಂದು ಹೇಳಿದರು.
ಮಾದಪ್ಪನಹಳ್ಳಿಯಲ್ಲಿ 18 ಎಕರೆ 38 ಗುಂಟೆ ಜಾಗಕ್ಕೆ 32 ನಕಲಿ ದಾಖಲೆಗಳು ಸೃಷ್ಠಿಯಾಗಿರುವುದು ತಮ್ಮ ಗಮನಕ್ಕೆ ಬಂದಿಲ್ಲ. ಆದರೆ, ಇದರ ಬಗ್ಗೆ ಪರಿಶೀಲನೆಗೆ ಆದೇಶಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.





