ಕಾರ್ಕಳ: ಶ್ರೀಮಧ್ವಾಚಾರ್ಯರ ಅಪರೂಪದ ಪಂಚಲೋಹದ ಶಿಲ್ಪ ಪತ್ತೆ

ಉಡುಪಿ, ಜೂ.14: ಉಡುಪಿಗೆ ಅಂತಾರಾಷ್ಟ್ರೀಯ ಖ್ಯಾತಿಯನ್ನು ತಂದು ಕೊಟ್ಟ, ಭಾರತದ ಆಚಾರ್ಯತ್ರಯರಲ್ಲಿ ಒಬ್ಬರಾದ ಮಾದ್ವ ಸಿದ್ಧಾಂತ ಪ್ರತಿಪಾದಕ ಶ್ರೀಮಧ್ವಾಚಾರ್ಯರ ಅಪರೂಪದ ಪಂಚಲೋಹದ ಶಿಲ್ಪವೊಂದು ಕಾರ್ಕಳ ತಾಲೂಕಿನ ತೆಳ್ಳಾರು ಜಲದುರ್ಗಾ ದೇವಾಲಯದಲ್ಲಿ ಪತ್ತೆಯಾಗಿದೆ ಎಂದು ಜಿಲ್ಲೆಯ ಪುರಾತತ್ವ ಸಂಶೋಧಕ, ಶಿರ್ವದ ಎಂ. ಎಸ್. ಆರ್.ಎಸ್. ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಮುರುಗೇಶಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಅಷ್ಟಮಠಗಳನ್ನು ಒಳಗೊಂಡ ಶ್ರೀಕೃಷ್ಣದೇವಾಲಯವನ್ನು ಸ್ಥಾಪಿಸಿದ ಆಚಾರ್ಯ ಮಧ್ವರು ದ್ವೈತ ಸಿದ್ಧಾಂತದ ಹರಿಕಾರರೆನಿಸಿದರು. ಉಡುಪಿಯಿಂದ 8 ಕಿ.ಮೀ. ದೂರದಲ್ಲಿರುವ ಪಾಜಕದಲ್ಲಿ ಕ್ರಿ.ಶ. 1238ರಲ್ಲಿ ಜನಿಸಿದರು. ತಮ್ಮ 16ನೇ ವಯಸ್ಸಿನಲ್ಲಿ ಅಚ್ಚುತ ಪ್ರೇಕ್ಷಾಚಾರ್ಯರಿಂದ ಸನ್ಯಾಸ ದೀಕ್ಷೆಯನ್ನು ಪಡೆದು, ಪೂರ್ಣಪ್ರಜ್ಞ ಹಾಗೂ ಅನಂದತೀರ್ಥ ಎಂಬ ಅಭಿದಾನವನ್ನು ಪಡೆದುಕೊಂಡರು. 80ವರ್ಷಗಳ ತುಂಬು ಜೀವನವನ್ನು ನಡೆಸಿದ ಆಚಾರ್ಯರು 1317ರಲ್ಲಿ ಹರಿಸಾಯುಜ್ಯವನ್ನು ಪಡೆದರು.
ಈಗ ತೆಳ್ಳಾರಿನಲ್ಲಿ ದೊರೆತಿರುವ ಆಚಾರ್ಯರ ಪಂಚಲೋಹದ ಶಿಲ್ಪ ಕೇವಲ ಮೊಟ್ಟಮೊದಲ ಲೋಹದ ಶಿಲ್ಪ ಮಾತ್ರವಲ್ಲ, ಇದುವರೆಗೆ ದೊರೆತ ಆಚಾರ್ಯರ ಶಿಲ್ಪಗಳಲ್ಲಿಯೇ ಅತ್ಯಂತ ಪ್ರಾಚೀನವಾದದ್ದು ಹಾಗೂ ನಯನ ಮನೋಹರವಾದದ್ದು ಎಂಬುದು ವಿಶೇಷ. ಶ್ರೀ ಶಂಕರಾಚಾರ್ಯ ಮತ್ತು ಶ್ರೀರಾಮನುಜರ ನೂರಾರು ಶಿಲ್ಪಗಳು ಮತ್ತು ಲೋಹದ ಮೂರ್ತಿಗಳು ದೊರೆಯುತ್ತವೆ. ಆದರೆ ಇದುವರೆಗೆ ಆಚಾರ್ಯ ಮಧ್ವರ ಲೋಹದ ಮೂರ್ತಿ ದೊರೆಯದಿದ್ದುದು ಒಂದು ಕೊರತೆಯಾಗಿತ್ತು. ಆ ಕೊರತೆಯನ್ನು ಈ ಶೋಧನೆ ಇಲ್ಲವಾಗಿಸಿದೆ. ಭಾರತದ ಮಾಧ್ವ ಇತಿಹಾಸದಲ್ಲಿ ಇದೊಂದು ಪ್ರಮುಖವಾದ ಸಂಶೋಧನೆಯಾಗಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.







