ಶೌಚಾಲಯ ನಿರ್ಮಾಣದಲ್ಲಿ ಅವ್ಯವಹಾರದ ಆರೋಪ: ದೂರು

ಗುಂಡ್ಲುಪೇಟೆ, ಜೂ. 14: ಶೌಚಾಲಯ ನಿರ್ಮಾಣದಲ್ಲಿ ಭಾರಿ ಪ್ರಮಾಣದಲ್ಲಿ ಹಣದುರುಪಯೋಗ ಮಾಡಿಕೊಂಡ ಫಲಾನುಭವಿಗಳೂ ಸೇರಿದಂತೆ ಗ್ರಾಪಂ ಅಧ್ಯಕ್ಷೆ ಹಾಗೂ ನೌಕರರ ವಿರುದ್ದ ತಾಲೂಕು ಪಂ. ಕಾರ್ಯ ನಿರ್ವಾಹಕಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.
ತಾಲೂಕಿನ ಚಿಕ್ಕಾಟಿ ಗ್ರಾಮ ಪಂ. 2015 ನೇ ಸಾಲಿನಲ್ಲಿ ಭಾರಿ ಪ್ರಮಾಣದ ಹಣ ದುರುಪಯೋಗವಾಗಿರುವ ಬಗ್ಗೆ ಜಿಪಂ ಮಾಜಿ ಸದಸ್ಯ ಬಿ.ಎಂ.ಮುನಿರಾಜು 2016ರಲ್ಲಿ ಗ್ರಾಮೀಣ ಅಭಿವೃದ್ದಿ ಸಚಿವ ಎಚ್.ಕೆ.ಪಾಟೀಲ ಅವರಿಗೆ ದೂರು ನೀಡಿದ್ದರು.
ಗ್ರಾಮೀಣ ಅಭಿವೃದ್ದಿ ಸಚಿವಾಲಯದಿಂದ ಈ ಬಗ್ಗೆ ತನಿಖೆ ನಡೆಸುವಂತೆ ಬಂದ ಸೂಚನೆಯ ಮೇರೆಗೆ ಚಾಮರಾಜನಗರ ಜಿಪಂ ಅಧಿಕಾರಿಗಳು ತನಿಖೆ ನಡೆಸಿದಾಗ 2015 ಏಪ್ರಿಲ್ ನಿಂದ 2016 ಆಗಸ್ಟ್ ತಿಂಗಳವರೆಗೆ 20.31 ಲಕ್ಷ ರೂ. ದುರುಪಯೋಗವಾಗಿರುವುದು ಪತ್ತೆಯಾಗಿತ್ತು. ಈ ಹಗರಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ಮೊದಲನೇ ಆರೋಪಿಯಾಗಿ ಗ್ರಾಪಂ ಅಧ್ಯಕ್ಷೆ ಕವಿತಾ, ಎರಡನೇ ಆರೋಪಿ ಅಭಿವೃದ್ದಿ ಅಧಿಕಾರಿ ಪುಷ್ಪಲತಾ, ಮೂರನೇ ಆರೋಪಿ ಕಂಪ್ಯೂಟರ್ ಆಪರೇಟರ್ ರಾಚಪ್ಪಾಜಿ, ನಾಲ್ಕನೇ ಆರೋಪಿ ಡಾಟಾ ಆಪರೇಟರ್ ನಾಗರತ್ನ ಹಾಗೂ ಐದನೇ ಆರೋಪಿ ಬಿಲ್ ಕಲೆಕ್ಟರ್ ಚಿಕ್ಕರಾಜು ಹಾಗೂ 104 ಫಲಾನುಭವಿಗಳ ವಿರುದ್ದ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.
ಬುಧವಾರ ಸಂಜೆ ತಾಪಂ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಕಮ್ಮಾರ್ ಲೆಕ್ಕಪತ್ರ ವಿಭಾಗದ ಸುಬ್ರಹ್ಮಣ್ಯ ಅವರೊಂದಿಗೆ ಬೇಗೂರು ಠಾಣೆಗೆ ತೆರಳಿ ಪಿಎಸ್‍ಐ ಕಿರಣ್ ಕುಮಾರ್ ಅವರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.





