ಮನೆ ನಿರ್ವಹಣೆಗಾಗಿ ಇಂಟರ್ನೆಟ್, ಸ್ಮಾರ್ಟ್ ಸ್ಟಿಕ್, ಟ್ರೀ ಕ್ಲೆಂಬರ್!
ಮಂಗಳೂರು, ಜೂ.14: ಬೆಂಜನಪದವಿನ ಕೆನರಾ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ಬಿ.ಇ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪ್ರಾಜೆಕ್ಟ್ ಮೂಲಕ ಇಂಟರ್‌ನೆಟ್ ಆಧಾರಿತ ತಂತ್ರಜ್ಞಾನ, ಸ್ಮಾರ್ಟ್ ಸ್ಟಿಕ್ ಹಾಗೂ ಟ್ರೀ ಕ್ಲೆಂಬರ್ ಎಂಬ ಅವಿಷ್ಕಾರಗಳನ್ನೂ ಮಾಡಿದ್ದಾರೆ.
ಇಂಟರ್ನೆಟ್ ಬೇಸ್ಡ್ ಟೆಕ್ನಾಲಜಿಯ ಈ ಸಾಧನವನ್ನು ಮನೆಯ ತಾಪಮಾನ, ಟಾಂಕಿಯಲ್ಲಿರುವ ನೀರಿನ ಪ್ರಮಾಣ, ಮನೆಯೊಳಗೆ ಎಲೆಕ್ಟ್ರಾನಿಕ್ ಸ್ಥಿತಿಯ ವೀಕ್ಷಣೆ, ಅಡುಗೆ ಅನಿಲ ಸೋರಿಕೆಯಾದಲ್ಲಿ ಸಂದೇಶ ಹೀಗೆ ಅಂತರ್ಜಾಲ ಮತ್ತು ಮೊಬೈಲ್ ಎಪ್ಲಿಕೇಶನ್ ಬಳಸಿಕೊಳ್ಳುವ ವ್ಯವಸ್ಥೆಯಿರುವ ಈ ಪ್ರಾಜೆಕ್ಟನ್ನು ಕಾಲೇಜಿನ ಸಹ ಪ್ರಾಧ್ಯಾಪಕ ಪದ್ಮಹಾಸ ಎಂ.ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಶ್ರೇಯಸ್ ನಾಯಕ್, ಸುನಿಲ್, ಸುಪ್ರೀತ್ ಕುವೆತ್ತೋಡಿ, ಅಮಿತ್ ಕುಮಾರ್ ರೂಪಿಸಿದ್ದಾರೆ.
ಹೀಗೊಂದು ಸ್ಮಾರ್ಟ್ ಸ್ಟಿಕ್:
ವಯಸ್ಸಾದವರ ಆರೋಗ್ಯದ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಸ್ಮಾರ್ಟ್ ಸ್ಟಿಕ್‌ನ ಪ್ರಾಜೆಕ್ಟ್ ರೂಪುಗೊಂಡಿದೆ. ನಾಡಿಮಿಡಿತವನ್ನು ಗ್ರಹಿಸುವ ಸಂವೇದಕಗಳು ಇಲ್ಲಿನ ವಾಕಿಂಗ್ ಸ್ಟಿಕ್ ಹಿಡಿಯ ಭಾಗದಲ್ಲಿವೆ. ಹೀಗೆ ಪತ್ತೆಯಾದ ನಾಡಿಮಿಡಿತ ಬ್ಲೂಟೂತ್ ಮಾಡ್ಯೂಲ್ ಮೂಲಕ ನಿರಂತರ ಆ್ಯಪ್‌ಗೆ ರವಾನೆಯಾಗುತ್ತವೆ. ಅಸಹಜತೆಗಳ ಸಹಿತ ರೀಡಿಂಗ್ ಸಂಬಂಧಪಟ್ಟವರ ಮೊಬೈಲ್‌ಗೆ ಸಂದೇಶ ರೂಪದಲ್ಲಿ ಸಿಗುತ್ತದೆ. ಒಂದು ಮೀಟರ್ ಅಂತರದಲ್ಲಿ ಎದುರಾಗುವ ಅಡೆತಡೆಗಳ ಬಗ್ಗೆಯೂ ಬೀಪ್ ಸೌಂಡ್ ಮೂಲಕ ಈ ವಾಕಿಂಗ್ ಸ್ಟಿಕ್ ಎಚ್ಚರಿಕೆಯ ಸಂದೇಶ ನೀಡುವಂತೆ ರೂಪಿಸಲಾಗಿರುವ ಈ ಪ್ರಾಜೆಕ್ಟನ್ನು ಕಾಲೇಜಿನ ಸಹ ಪ್ರಾಧ್ಯಾಪಕಿ ಅಶ್ವಿನಿ ವಿ. ಹೊಳ್ಳ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಶರಲ್ ವೇಗಸ್, ಶರಣ್ಯ ಎಸ್, ಸುಮನಾ ನಾಯಕ್, ವಿದ್ಯಾಲಕ್ಷ್ಮೀ ಕಾಮತ್ ರೂಪಿಸಿದ್ದಾರೆ.
ಟ್ರೀ ಕ್ಲೆಂಬರ್:
ಕಾರ್ಮಿಕರ ಕೊರತೆಯ ಇಂದಿನ ದಿನಗಳಲ್ಲಿ ಅಡಿಕೆ ಮರ ಏರುವ ಯಂತ್ರವನ್ನು ಸುಧಾರಿತ ರೀತಿಯಲ್ಲಿ ಇಲ್ಲಿ ಪ್ರಾಜೆಕ್ಟ್ ಮೂಲಕ ರೂಪಿಸಲಾಗಿದೆ. ಮೈಕ್ರೋ ಕಂಟ್ರೋಲರ್ ಮೂಲಕ ತಿರುಗುವ ಮೋಟಾರು ರಾಟೆಯಿಂದ ಯಂತ್ರವನ್ನು ಮರದ ಮೇಲಕ್ಕೇರಿಸುತ್ತದೆ. ಮರಕ್ಕೆ ಯಂತ್ರ ಸುರಕ್ಷತೆಗಾಗಿ ಲಾಕ್ ಮಾಡುವ ವ್ಯವಸ್ಥೆಯೂ ಇದೆ. ಅಲ್ಲಿ ಬ್ಲೇಡ್ ಬಳಸಿಕೊಂಡು ಅಡಿಕೆಗಳನ್ನು ಕೊಯ್ಯುವ ಬಗ್ಗೆಯೂ ಸೌಲಭ್ಯವಿದೆ. ರೋಬೋಟ್‌ಗೆ ಅವಕಾಶ ಮತ್ತು ಕೀಟನಾಶಕಗಳ ಸಿಂಪಡಣೆಗೆ ಈ ವಿನ್ಯಾಸವನ್ನು ಅಭಿವೃದ್ಧಿ ಪಡಿಸಬಹುದಾಗಿದೆ.
ಕಾಲೇಜಿನ ಸಹ ಪ್ರಾಧ್ಯಾಪಕರಾದ ವಾಯುಸುತ, ಅಶ್ವಿನ್ ಕುಮಾರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅಶ್ವಿನ್ ಪ್ರಭು, ದರ್ಶನ್, ಹರೀಶ್ ಮತ್ತು ಗಣೇಶ್ ಈ ಪ್ರಾಜೆಕ್ಟನ್ನು ರೂಪಿಸಿದ್ದಾರೆ.