ಹೆಜಮಾಡಿ: ರಸ್ತೆ ಮೋರಿ ಕುಸಿತ

ಪಡುಬಿದ್ರಿ,ಜೂ.14: ಬ್ರಿಟಿಷ್ ಕಾಲದಲ್ಲಿ ಹೆದ್ದಾರಿಯಾಗಿದ್ದ ಹೆಜಮಾಡಿ ಒಳ ರಸ್ತೆ (ಹಳೇ ಎಮ್‌ಬಿಸಿ ರಸ್ತೆ)ಯ ಹೆಜಮಾಡಿ ಕೋರ್ದಬ್ಬು ದೈವಸ್ಥಾನದ ಗಡುವಾಡು ಮುಂಭಾಗದ ಮೋರಿಯೊಂದು ಕುಸಿದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡ ಘಟನೆ ಬುಧವಾರ ನಡೆದಿದೆ.
ಈ ಒಳ ರಸ್ತೆಯಲ್ಲಿ ಮಳೆ ನೀರು ಹರಿದು ಹೋಗಲು ಚಪ್ಪಡಿ ಹಾಸುಕಲ್ಲು ಬಳಸಿ ಮೋರಿಯೊಂದನ್ನು ನಿರ್ಮಿಸಲಾಗಿತ್ತು. ಕಳೆದ ವರ್ಷದವರೆಗೂ ಗಟ್ಟಿಮುಟ್ಟಾಗಿದ್ದ ಈ ಮೋರಿಯು ಟೋಲ್ ಆರಂಭಗೊಂಡ ಬಳಿಕ ಅತಿಭಾರದ ವಾಹನಗಳ ಸಂಚಾರದಿಂದ ಬುಧವಾರ ಮುಂಜಾನೆ ಕುಸಿದು ಬಿದ್ದಿದೆ.
ಲೋಕೋಪಯೋಗಿ ಇಲಾಖೆಯ ರಸ್ತೆಯಾಗಿರುವ ಹಿನ್ನೆಲೆಯಲ್ಲಿ ವಿಷಯ ತಿಳಿದ ಶಾಸಕ ವಿನಯಕುಮಾರ್ ಸೊರಕೆ ಹಾಗೂ ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಇಲಾಖಾಧಿಕಾರಿ ಬಿವಿ ಹೆಗ್ಡೆಯವರನ್ನು ಸಂಪರ್ಕಿಸಿ ತಕ್ಷಣ ಕ್ರಮಕ್ಕೆ ಸೂಚಿಸಿದ್ದರು.
ಘಟನಾ ಸ್ಥಳಕ್ಕೆ ಅಗಮಿಸಿದ ಇಲಾಖಾ ಇಂಜಿನಿಯರ್ ಮಿಥುನ್ ಶೆಟ್ಟಿ ಪರಿಶೀಲನೆ ನಡೆಸಿದ್ದಾರೆ, ಈ ವೇಳೆ ತಾತ್ಕಾಲಿಕವಾಗಿ ಕಡಿದುಹೋದ ಜಾಗಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಮುಂದಾದರು. ಆದರೆ ನಾಗರಿಕರು ಅವರನ್ನು ತರಾಟೆಗೆ ತಂದು ನಮಗೆ ಶಾಶ್ವತವಾಗಿ ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಒತ್ತಾಯಿಸಿದರು.
ಸ್ಥಳೀಯರ ಒತ್ತಾಯಕ್ಕೆ ಮಣಿದ ಅವರು ತುರ್ತು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಇಲಾಖಾ ಮುಖ್ಯಸ್ಥರ ಗಮನಕ್ಕೆ ತಂದು ಶೀಘ್ರ ಮೋರಿ ಅಥವಾ ಕಿರು ಸೇತುವೆ ನಿರ್ಮಾಣಗೋಲಿಸಲಾಗುವುದು ಎಂದವರು ತಿಳಿಸಿದ್ದಾರೆ.
ಬಹುತೇಕ ವಾಹನಗಳು ಟೋಲ್ ಪಾವತಿ ತಪ್ಪಿಸಲು ಈ ದಾರಿಯಾಗಿ ಸಂಚರಿಸುತ್ತಿವೆ. ಇದರಲ್ಲಿ 20 ರಿಂದ 40 ಟನ್ ಭಾರದ ಭಾರೀ ವಾಹನಗಳು ಸಂಚರಿಸುತ್ತಿದ್ದು ಈ ಭಾರವನ್ನು ತಡೆಯಲಾಗದೆ ಹಳೆ ಕಿರು ಸೇತುವೆ ಮುರಿದಿದ್ದು ಮಾತ್ರವಲ್ಲದೆ ರಸ್ತೆಗಳು ಹಾಳಾಗಿವೆ. ಇದನ್ನು ಕೂಡಲೇ ಸರಿಪಡಿಸಿ ಈ ಭಾಗದ್ದಲ್ಲದ ವಾಹನಗಳು ಈ ದಾರಿಯಾಗಿ ಸಾಗಿದರೆ ನಾವೇ ತಡೆದು ನಿಲ್ಲಿಸುತ್ತೇವೆ ಎಂದು ಹೆಜಮಾಡಿ ನಾಗರಿಕ ಸಮಿತಿ ಕಾರ್ಯದರ್ಶಿ ಶೇಖರ್ ಹೆಜ್ಮಾಡಿ ಎಚ್ಚರಿಸಿದರು.







