ಮಧ್ಯಪ್ರದೇಶ: ಮತ್ತೆ ಇಬ್ಬರು ರೈತರ ಅತ್ಮಹತ್ಯೆ

ಭೋಪಾಲ್, ಜೂ.14: ಮಧ್ಯಪ್ರದೇಶದ ಬಾಲ್‌ಘಾಟ್ ಮತ್ತು ಬರ್ವಾನಿ ಜಿಲ್ಲೆಯಲ್ಲಿ ಮತ್ತೆ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗುವುದರೊಂದಿಗೆ ಜೂ.8ರಿಂದ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಏಳಕ್ಕೇರಿತು.
ಬಾಲ್‌ಘಾಟ್ ಜಿಲ್ಲೆಯ ಬಲ್ಲಾರ್‌ಪುರ ಗ್ರಾಮದಲ್ಲಿ ರಮೇಶ್ ಬಾಸೆನ್(42 ವರ್ಷ) ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ 1.5 ಲಕ್ಷ ಕೃಷಿ ಸಾಲ ಮಾಡಿದ್ದು ಸಾಲ ಮರುಪಾವತಿಸಲಾಗದೆ ಖಿನ್ನತೆಗೆ ಒಳಗಾಗಿದ್ದ ಎಂದು ಆತನ ಪತ್ನಿ ತಿಳಿಸಿದ್ದಾಳೆ. ಆದರೆ ಸಾಲ ಮರುಪಾವತಿಸದ ಚಿಂತೆ ಆತ್ಮಹತ್ಯೆಗೆ ಕಾರಣವೇ ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಿಲ್ಲ. ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇನ್ನೋರ್ವ ರೈತ, ಶೋಮ್ಲಾ (60 ವರ್ಷ) ಕೂಡಾ ಕೀಟನಾಶಕ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಘಟನೆ ಬರ್ವಾನಿ ಜಿಲ್ಲೆಯ ಪಿಸ್ನವಾಲ್ ಎಂಬಲ್ಲಿ ನಡೆದಿದೆ. ಈತ ಖಾಸಗಿ ವ್ಯಕ್ತಿಯೋರ್ವನಿಂದ 2 ಲಕ್ಷ ಮತ್ತು ಬ್ಯಾಂಕ್‌ನಿಂದ 1 ಲಕ್ಷ ಕೃಷಿ ಸಾಲ ಪಡೆದಿದ್ದು ಸಾಲ ಮರುಪಾವತಿ ಮಾಡಲು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ರೈತನ ಪತ್ನಿ ತಿಳಿಸಿದ್ದಾಳೆ.





