ಕೆಸರು ಗದ್ದೆಯಾದ ಮರ್ಧಾಳ-ಕೆರ್ಮಾಯಿ ರಸ್ತೆ
ಕೇಳುವವರಿಲ್ಲದೆ ಮೂಲೆಗುಂಪಾಗಿರುವ ಸಾರ್ವಜನಿಕರ ವ್ಯಥೆ

ಕಡಬ, ಜೂ.14: ಇಲ್ಲಿನ ಮರ್ಧಾಳದಿಂದ ಬಜಕೆರೆಯ ಮೂಲಕ ಕೋಡಿಂಬಾಳವನ್ನು ಸಂಪರ್ಕಿಸುವ ಜಿಲ್ಲಾ ಪಂಚಾಯತ್ ರಸ್ತೆಯು ಸಂಪೂರ್ಣ ಕೆಸರುಗದ್ದೆಯಂತಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಬಂಟ್ರ, 102 ನೆಕ್ಕಿಲಾಡಿ ಮತ್ತು ಐತ್ತೂರು ಸೇರಿದಂತೆ 3 ಗ್ರಾಮಗಳ ಸಂಪರ್ಕ ಕೊಂಡಿಯಾಗಿರುವ ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಜನರು ಸಂಚರಿಸುತ್ತಿದ್ದಾರೆ.
ಸುಮಾರು 1000 ಮನೆಗಳಿಗೆ ಸಂಪರ್ಕವಿರುವ ಈ ರಸ್ತೆಯಲ್ಲಿ ಬಜಕೆರೆ ರೈಲ್ವೇ ಸ್ಟೇಷನ್, ಕೆರ್ಮಾಯಿ ಸರಕಾರಿ ಪ್ರಾಥಮಿಕ ಶಾಲೆ, ಗುಡ್ ಶೆಫರ್ಡ್ ಆಂಗ್ಲ ಮಾಧ್ಯಮ ಶಾಲೆ, 4 ಚರ್ಚುಗಳು, 1 ಭಜನಾ ಮಂದಿರ, ದೇವಸ್ಥಾನ-ದೈವಸ್ಥಾನಗಳು ಮತ್ತು ಎನ್.ಕೂಪ್, ಮಾಯಿಪಾಜೆ, ಗುರಿಯಡ್ಕ ಹರಿಜನ ಕಾಲನಿ ಮತ್ತು ಪಾದೆಮಜಲು ಹರಿಜನ ಕಾಲನಿಗೆ ಇದೇ ರಸ್ತೆಯ ಮೂಲಕ ಸಂಪರ್ಕವಿದೆ.
ಈ ಜಿಲ್ಲಾ ಪಂಚಾಯಿತಿ ರಸ್ತೆಯಲ್ಲೀಗ ಸಂಚರಿಸುವುದೇ ಕಷ್ಟವಾಗಿದೆ. ಹಿಂದೊಮ್ಮೆ ಈ ರಸ್ತೆ ದುರಸ್ತಿಗೆ ಆಗ್ರಹಿಸಿ ನಾಗರಿಕರು ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಬಹಿಷ್ಕರಿಸಲು ಮುಂದಾದಾಗ ಜನಪ್ರತಿನಿಧಿಗಳು ರಸ್ತೆ ಅಭಿವೃದ್ದಿಯ ಆಶ್ವಾಸನೆ ನೀಡಿದ ಮೇಲೆ ಸಾರ್ವಜನಿಕರು ಹೊಸ ಭರವಸೆಯೊಂದಿಗೆ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ತದನಂತರ ಜಿ.ಪಂ. ಸದಸ್ಯರು ತನ್ನ ಅನುದಾನದಿಂದ 1 ಲಕ್ಷ ರೂ.ಗಳನ್ನು ನೀಡಿದ್ದರಲ್ಲಿ ಊರವರೇ ನೇತೃತ್ವ ವಹಿಸಿ ಮಣ್ಣು ಹಾಕುವ ಮೂಲಕ ತುರ್ತು ಕಾಮಗಾರಿ ನಡೆಸಿದ್ದರು.
ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿರುವ ಈ ರಸ್ತೆಯ ಕೋರಿಯಾರ್ ಎಂಬಲ್ಲಿ ಕುಮಾರಧಾರಾ ನದಿಯು ಹರಿಯುತ್ತಿದ್ದು, ನದಿಯ ಇನ್ನೊಂದು ಪಾರ್ಶ್ವದಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯ ’ಬಳ್ಪ’ ಗ್ರಾಮವಿದ್ದು, ಇದಕ್ಕೆ ಸೇತುವೆ ನಿರ್ಮಾಣವಾದಲ್ಲಿ ಸುಲಭವಾಗಿ ಸುಳ್ಯ ತಾಲೂಕನ್ನು ಸಂಪರ್ಕಿಸಬಹುದಾಗಿದೆ.
ರಸ್ತೆ ಅಭಿವೃದ್ಧಿಯ ಬಗ್ಗೆ ಬಹಳ ಹಿಂದಿನಿಂದಲೂ ಸಹಿ ಸಂಗ್ರಹ ಮಾಡಿ ಶಾಸಕರಿಗೆ, ಸಂಸದರಿಗೆ, ಜಿಲ್ಲಾಧಿಕಾರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಚುನಾವಣಾ ಸಮಯದಲ್ಲಿ ಜಲ್ಲಿ ತಂದು ರಾಶಿ ಹಾಕಿ ಚುನಾವಣೆ ಮುಗಿದ ನಂತರ ಅದನ್ನು ಎತ್ತಿಕೊಂಡು ಹೋಗುವುದು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆ. ಜನಪ್ರತಿನಿಧಿಗಳು ಆಗಮಿಸಿ ಟೊಳ್ಳು ಭರವಸೆಯೊಂದಿಗೆ ಜನರನ್ನು ಮೂರ್ಖರನ್ನಾಗಿಸಿ ಹೋಗುವುದಲ್ಲದೆ ಮತ್ತೇನೂ ಪ್ರಯೋಜನವಿಲ್ಲವೆನ್ನುತ್ತಾರೆ ಊರವರು.
ಈ ರಸ್ತೆಯು ಸುಮಾರು 25 ವರ್ಷಗಳ ಹಿಂದೆ ಡಾಮರೀಕರಣವಾಗಿದ್ದು, ತದ ನಂತರ ಒಂದು ಸಲ ಅಂದಾಜು 1 ಕಿ.ಮೀ. ತೇಪೆ ಕಾರ್ಯ ಮತ್ತು ಕಳೆದ ಸಾಲಿನಲ್ಲಿ ಎರಡು ಕಡೆಗಳಲ್ಲಿ ಸುಮಾರು 130 ಮೀಟರ್ ಕಾಂಕ್ರೀಟ್ ಹಾಕಿದ್ದು, ಈ ಮಳೆಗಾಲ ಆರಂಭದ ಮೊದಲು ಮರ್ಧಾಳ ರಾಜ್ಯ ಹೆದ್ದಾರಿಯಿಂದ ಕರ್ಮಾಯಿ ರಸ್ತೆಗೆ ತಿರುವಿನಲ್ಲಿ ಮೋರಿ ರಚಿಸಿದ್ದು ಬಿಟ್ಟರೆ ಇನ್ಯಾವುದೇ ರೀತಿಯ ಅಭಿವೃದ್ಧಿ ಕಂಡಿಲ್ಲ.
ಈ ರಸ್ತೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸು ಸಂಚರಿಸುತ್ತಿದ್ದು, ಮಳೆಗಾಲದಲ್ಲಿ ಹೊಂಡಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚರಿಸಲಾಗದೆ ಬಸ್ಸುಗಳನ್ನು ಅರ್ಧದಲ್ಲೇ ತಿರುಗಿಸಿ ಹೋದ ಉದಾಹರಣೆಯಿದೆ. ಕೆಲವೊಂದು ವಾಹನಗಳು ಸಂಚರಿಸುವಾಗ ಶಾಲಾ ಮಕ್ಕಳ ಸಮವಸ್ತ್ರದಲ್ಲಿ ಕೆಸರು ರಾಚಿ ಅದೆಷ್ಟೋ ಮಕ್ಕಳು ಶಾಲೆಗೆಂದು ಮನೆಯಿಂದ ಬಂದು ಅರ್ಧದಿಂದಲೇ ಹಿಂತಿರುಗಿ ಮನೆಗೆ ಹೋದದ್ದಿದೆ. ಎರಡು ವರ್ಷಗಳ ಹಿಂದೆ ಕೆರ್ಮಾಯಿ ಚರ್ಚ್‌ನವರು ಊರವರ ಜತೆ ಸೇರಿಕೊಂಡು ಸುಮಾರು 2 ಲಕ್ಷ ವೆಚ್ಚದಲ್ಲಿ ಶ್ರಮದಾನ ನಡೆಸಿದ್ದರು. ವಿವಿಧ ರಾಜಕೀಯ ಪಕ್ಷದ ಮುಖಂಡರು ದಿನನಿತ್ಯ ಇದೇ ರಸ್ತೆಯ ಮೂಲಕ ಸಂಚರಿಸುತ್ತಿದ್ದರೂ ಇದರ ಬಗ್ಗೆ ಗಮನಹರಿಸದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.







