ವಿದ್ಯುತ್ ತಂತಿ ಸ್ಪರ್ಶಿಸಿ ಗಾಯ: ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ಅಮಾನತಿಗೆ ಸಚಿವ ಖಾದರ್ ಸೂಚನೆ
ಮಂಗಳೂರು, ಜೂ. 14: ಉಳ್ಳಾಲದ ನಿವಾಸಿ ಮುಹಮ್ಮದ್ ಮುಕ್ಕಚ್ಚೇರಿ (60) ಎಂಬವರು ಮಂಗಳವಾರ ವಿದ್ಯುತ್ ಸ್ಪರ್ಶದಿಂದ ಗಾಯಗೊಂಡ ಘಟನೆಯನ್ನು ತನಿಖೆ ನಡೆಸಿ ನಿರ್ಲಕ್ಷ ವಹಿಸಿದ ಪ್ರದೇಶದ ಲೈನ್‌ಮ್ಯಾನ್‌ನ ಅಮಾನತು ಹಾಗೂ ಜೂನಿಯರ್ ಇಂಜಿರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವ ಯು.ಟಿ.ಖಾದರ್ ಅವರು ಮೆಸ್ಕಾಂ ಆಡಳಿತ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಮುಹಮ್ಮದ್ ಮುಕ್ಕಚ್ಚೇರಿ ಅಂಗಡಿಯೊಂದನ್ನು ನಡೆಸುತ್ತಿದ್ದ ಮುಂಜಾನೆ ಸುಮಾರು 6 ಗಂಟೆ ಹೊತ್ತಿಗೆ ಅಂಗಡಿ ಕಡೆಗೆ ಹೋಗುತ್ತಿದ್ದಾಗ ದಾರಿ ಮಧ್ಯೆ ನೇತಾಡುತ್ತಿದ್ದ ವಿದ್ಯುತ್ ತಂತಿ ಸ್ಪರ್ಶಗೊಂಡು ಗಂಭೀರ ಗಾಯಗೊಂಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಅವರ ಪುತ್ರ ಆ್ಯಂಬುಲೆನ್ಸ್ 108ಗೆ ಕರೆ ಮಾಡಿದಾದ ಕರೆ ಸ್ವೀಕರಿಸಿದ ವ್ಯಕ್ತಿಯು ವೆನ್ಲಾಕ್ ಆಸ್ಪತ್ರೆ ಹೊರತುಪಡಿಸಿ ಖಾಸಗಿ ಆಸ್ಪತ್ರೆಗೆ ಬರುವುದಿಲ್ಲ ಎಂದು ಹೇಳಿದ್ದರೆನ್ನಲಾಗಿದೆ. ಕೊನೆಗೆ ಮುಹಮ್ಮದ್ ರ ಪುತ್ರ ತಂದೆಯನ್ನು ಖಾಸಗಿ ಆಸ್ಪತ್ರೆ ದಾಖಲಿಸಿದ್ದರು.
ಮುಹಮ್ಮದ್ ಮುಕ್ಕಚ್ಚೇರಿ ದಾಖಲಾಗಿದ್ದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿರುವ ಸಚಿವ ಖಾದರ್ ಅವರು, ತಾನು ಆರೋಗ್ಯ ಸಚಿವನಾಗಿದ್ದ ಸಂದರ್ಭದಲ್ಲಿ ರೋಗಿ ಬಯಸಿದ್ದಲ್ಲಿ ಖಾಸಗಿ ಆಸ್ಪತ್ರೆಗೂ ಕೊಂಡೊಯ್ಯಬಹುದೆಂದು ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಫೋನ್ ಕರೆ ಸ್ವೀಕರಿಸಿದ 108 ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸೂಚನೆ ನೀಡುವುದಾಗಿ ಹೇಳಿದ್ದಾರೆ.
ಅಲ್ಲದೆ, ವಿದ್ಯುತ್ ತಂತಿ ನೇತಾಡಿ ಓರ್ವ ಗಾಯಗೊಂಡಿರುವ ಘಟನೆಗೆ ಸಂಬಂಧಿಸಿ ಆ ಪ್ರದೇಶದ ಲೈನ್‌ಮ್ಯಾನ್ ಹಾಗೂ ಕಿರಿಯ ಎಂಜಿನಿಯರ್ ಅವರನ್ನು ಹೊಣೆಯಾಗಿಸಿ ಅವರ ವಿರುದ್ಧ ತನಿಖೆಗೆ ಮೆಸ್ಕಾಂ ಎಂಡಿಗೆ ಸೂಚಿಸಲಾಗಿದೆ. ಸಿಬ್ಬಂದಿಗಳ ನಿರ್ಲಕ್ಷ ಕಂಡುಬಂದಲ್ಲಿ ಲೈನ್‌ಮ್ಯಾನ್‌ನ್ನು ಅಮಾನತುನಲ್ಲಿಟ್ಟು ಜೂನಿಯರ್ ಎಂಜನಿಯರ್ ವಿರುದ್ಧ ಸೂಕ್ತ ಕೈಗೊಳ್ಳಲು ನಿರ್ದೇಶನ ನೀಡಿರುವುದಾಗಿ ಅವರು ತಿಳಿಸಿದ್ದಾರೆ.