ಹಾಕಿ ವರ್ಲ್ಡ್ ಲೀಗ್ ಸೆಮಿಫೈನಲ್: ರೂಪಿಂದರ್, ಉತ್ತಪ್ಪ ಅಲಭ್ಯ

ಲಂಡನ್, ಜೂ.14: ಭಾರತದ ಡ್ರಾಗ್ ಫ್ಲಿಕರ್ ಹಾಗೂ ಡಿಫೆಂಡರ್ ರೂಪಿಂದರ್ ಪಾಲ್ ಸಿಂಗ್ ಹಾಗೂ ಮಿಡ್‌ಫೀಲ್ಡರ್ ಎಸ್.ಕೆ. ಉತ್ತಪ್ಪ ಗುರುವಾರದಿಂದ ಆರಂಭವಾಗಲಿರುವ ಹೀರೊ ಹಾಕಿ ವರ್ಲ್ಡ್ ಲೀಗ್ ಸೆಮಿ ಫೈನಲ್‌ನಿಂದ ಹೊರಗುಳಿದಿದ್ದಾರೆ.
ರೂಪಿಂದರ್ ಸ್ನಾಯು ಸೆಳೆತದ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಕನ್ನಡಿಗ ಉತ್ತಪ್ಪ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ಟೂರ್ನಿಯಿಂದ ದೂರ ಉಳಿಯಲಿದ್ದಾರೆ.
ಭಾರತ ತಂಡ ಗುರುವಾರ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ.
ರೂಪಿಂದರ್ ಬದಲಿಗೆ ಡಿಫೆಂಡರ್ ಜಸ್ಜಿತ್ ಸಿಂಗ್ ಕುಲಾರ್, ಉತ್ತಪ್ಪ ಬದಲಿಗೆ ಸುಮಿತ್ ಆಡಲಿದ್ದಾರೆ. ಜಸ್ಜಿತ್ ಭಾರತದ ಪರ 46 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು ಕೇವಲ ಐದು ಗೋಲುಗಳನ್ನು ಬಾರಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಾಯ್ ಕೇಂದ್ರದಲ್ಲಿ ನಡೆದಿದ್ದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.
ಸುಮಿತ್ 26ನೆ ಆವೃತ್ತಿಯ ಸುಲ್ತಾನ್ ಅಝ್ಲಾನ್ ಶಾ ಕಪ್ ಹಾಕಿ ಟೂರ್ನಮೆಂಟ್‌ನಲ್ಲಿ ಭಾರತದ ಹಿರಿಯರ ತಂಡದಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದರು. 2016ರಲ್ಲಿ ಜೂನಿಯರ್ ತಂಡದಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದ ಸುಮಿತ್ ಜೂನಿಯರ್ ವಿಶ್ವಕಪ್ ಜಯಿಸಿದ್ದ ಭಾರತ ತಂಡದಲ್ಲಿದ್ದರು.







