ಸೆಹ್ವಾಗ್ ಶ್ರೇಷ್ಠ, ಕೊಹ್ಲಿ ವಿಶ್ವ ಶ್ರೇಷ್ಠ ಆಟಗಾರ
ಮೃದು ಧೋರಣೆ ತಾಳಿದ ರಶೀದ್ ಲತೀಫ್

ಲಾಹೋರ್, ಜೂ.14: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋದ ಮೂಲಕ ವೀರೇಂದ್ರ ಸೆಹ್ವಾಗ್‌ರನ್ನು ಅಶ್ಲೀಲವಾಗಿ ನಿಂದಿಸಿ ಭಾರತೀಯರಿಂದ ಟೀಕೆಗೆ ಗುರಿಯಾಗಿದ್ದ ಪಾಕಿಸ್ತಾನದ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಶೀದ್ ಲತೀಫ್ ಇದೀಗ ಮೃದು ಧೋರಣೆ ತಾಳಿದ್ದು, ಸೆಹ್ವಾಗ್ ಹಾಗೂ ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ್ದಾರೆ.
‘‘ಪಾಕಿಸ್ತಾನದ ಬಗ್ಗೆ ಸೆಹ್ವಾಗ್ ನೀಡಿದ್ದ ಹೇಳಿಕೆಯ ಬಳಿಕ ಅವರಿಗೆ ಎಚ್ಚರಿಕೆಯ ಪಾಠ ಕಲಿಸಲು ಬಯಸಿದ್ದೆ. ನಾವಿಬ್ಬರೂ ಪರಸ್ಪರ ಗೌರವಿಸಿಕೊಳ್ಳಬೇಕು. ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ಬಾರಿ ತ್ರಿಶತಕ ಬಾರಿಸಿರುವ ಸೆಹ್ವಾಗ್ ಓರ್ವ ಶ್ರೇಷ್ಠ ಆಟಗಾರ. ಆದರೆ ಅವರು ದೇಶವೊಂದಕ್ಕೆ ಅಗೌರವ ತೋರಬಾರದು ಎಂಬುದನ್ನು ತಿಳಿದುಕೊಂಡಿರಬೇಕು. ನಾನು ಪಾಕಿಸ್ತಾನದ ಪರ ಮಾತನಾಡುತ್ತಿಲ್ಲ. ಅವರು ಶ್ರೀಲಂಕಾ ಅಥವಾ ಬಾಂಗ್ಲಾದೇಶದ ಬಗ್ಗೆಯೂ ಅಗೌರವದಿಂದ ನಡೆದುಕೊಳ್ಳಬಾರದು ಎಂದು ಲತೀಫ್ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೆ ಸೆಮಿ ಫೈನಲ್‌ಗೆ ತಲುಪಿದ್ದ ಭಾರತದ ನಾಯಕ ವಿರಾಟ್ ಕೊಹ್ಲಿಯವರನ್ನು ಶ್ಲಾಘಿಸಿದ ಲತೀಫ್,‘‘ನಾನು ಭಾರತಕ್ಕೆ ಅಭಿನಂದನೆ ಸಲ್ಲಿಸಲು ಬಯಸುವೆ. ಭಾರತಕ್ಕೆ ಫೈನಲ್ ತಲುಪುವ ಉತ್ತಮ ಅವಕಾಶ ಹೊಂದಿದೆ. ಕೊಹ್ಲಿ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದಾರೆ. ಕುಂಬ್ಳೆ(ಮುಖ್ಯಕೋಚ್) ನನ್ನ ವಿರುದ್ಧ ಆಡಿದ್ದು ಅವರೋರ್ವ ಪ್ರಾಮಾಣಿಕ ವ್ಯಕ್ತಿ. ನನ್ನ ವಿರುದ್ದ ಆಡಿರುವ ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ, ಅಜಯ್ ಜಡೇಜ, ಅಝರುದ್ದೀನ್, ಶ್ರೀನಾಥ್, ಶ್ರೀಕಾಂತ್‌ಗೆ ಅಭಿನಂದನೆ ಸಲ್ಲಿಸಲು ಬಯಸುವೆ’’ ಎಂದರು.







