ಕ್ವೀನ್ಸ್ ಚಾಂಪಿಯನ್‌ಶಿಪ್‌ನಿಂದ ದೂರವುಳಿದ ನಡಾಲ್

ಲಂಡನ್, ಜೂ.14: ಮುಂಬರುವ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ಗೆ ಸಜ್ಜಾಗುವ ಉದ್ದೇಶದಿಂದ ಸ್ಪೇನ್‌ನ ಸೂಪರ್‌ಸ್ಟಾರ್ ರಫೆಲ್ ನಡಾಲ್ ಮುಂದಿನ ವಾರ ಆರಂಭವಾಗಲಿರುವ ಏಗಾನ್(ಕ್ವೀನ್ಸ್) ಚಾಂಪಿಯನ್‌ಶಿಪ್‌ನಿಂದ ಹೊರಗುಳಿದಿದ್ದಾರೆ.
ಈ ವರ್ಷ ಆವೆಮಣ್ಣಿನ ಟೆನಿಸ್ ಅಂಗಣದಲ್ಲಿ ಭಾರೀ ಯಶಸ್ಸು ಸಾಧಿಸಿರುವ 31ರ ಹರೆಯದ ನಡಾಲ್ ರವಿವಾರ ಪ್ಯಾರಿಸ್‌ನಲ್ಲಿ 10ನೆ ಫ್ರೆಂಚ್ ಓಪನ್ ಕಿರೀಟ ಧರಿಸಿದ್ದರು. ಇದು ನಡಾಲ್ ಜಯಿಸಿದ್ದ 15ನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯಾಗಿದೆ.
‘‘ಮುಂದಿನ ವಾರ ಆರಂಭವಾಗಲಿರುವ ಏಗಾನ್ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಲು ತುಂಬಾ ಬೇಸರವಾಗುತ್ತಿದೆ. ನನಗೆ ಆ ಟೂರ್ನಿಯನ್ನು ಆಡುವುದೆಂದರೆ ಬಹಳ ಇಷ್ಟ. 2008ರಲ್ಲಿ ಆ ಟೂರ್ನಿಯನ್ನು ಜಯಿಸಿದ್ದೆ. ಪ್ರತಿವರ್ಷ ಏಗಾನ್ ಟೂರ್ನಿಯನ್ನು ಆಡಿದ ಬಳಿಕವಷ್ಟೇ ವಿಂಬಲ್ಡನ್ ಫೈನಲ್‌ಗೆ ತಲುಪುತ್ತಿದ್ದೆ ಎಂದು ನಡಾಲ್ ಹೇಳಿದ್ದಾರೆ.
ಈ ವರ್ಷದ ಕ್ವೀನ್ಸ್ ಟೂರ್ನಮೆಂಟ್‌ನಲ್ಲಿ ವಿಶ್ವದ ನಂ.1 ಆಟಗಾರ ಹಾಗೂ ಹಾಲಿ ಚಾಂಪಿಯನ್ ಆ್ಯಂಡಿ ಮರ್ರೆ, ಯುಎಸ್ ಓಪನ್ ಚಾಂಪಿಯನ್ ಸ್ಟಾನ್ ವಾವ್ರಿಂಕ ಭಾಗವಹಿಸಲಿದ್ದಾರೆ.





