ಕತರ್ ತಂಡಕ್ಕೆ ಫಿಫಾದಿಂದ ಶಿಸ್ತು ಕ್ರಮದ ಭೀತಿ

ದೋಹಾ, ಜೂ.14: ದಕ್ಷಿಣ ಕೊರಿಯಾ ವಿರುದ್ಧ ಮಂಗಳವಾರ ನಡೆದ ವಿಶ್ವಕಪ್‌ನ ಕ್ವಾಲಿಫೈಯರ್ ಪಂದ್ಯಕ್ಕೆ ಮೊದಲು ನಡೆದ ತಂಡದ ಅಭ್ಯಾಸದ ವೇಳೆ ದೇಶದ ದೊರೆಗೆ ಬೆಂಬಲ ವ್ಯಕ್ತಪಡಿಸುವ ಉದ್ದೇಶದಿಂದ ಟೀ-ಶರ್ಟ್‌ಗಳನ್ನು ಧರಿಸಿದ್ದ ಕತರ್ ರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರರು ಫಿಫಾದಿಂದ ಶಿಸ್ತು ಕ್ರಮ ಎದುರಿಸುವ ಸಾಧ್ಯತೆಯಿದೆ.
ದೋಹಾದಲ್ಲಿ ನಿರ್ಣಾಯಕ ಪಂದ್ಯಕ್ಕೆ ಮೊದಲು ನಡೆಸಿದ್ದ ಪೂರ್ವ ತಯಾರಿಯ ವೇಳೆ ಕತರ್ ಆಟಗಾರರು ದೇಶದ ದೊರೆ ಶೇಖ್ ತಮೀಮ್ ಬಿನ್ ಹಮಾದ್ ಅಲ್-ಥನಿ ಅವರ ಭಾವಚಿತ್ರವಿದ್ದ ಟೀ-ಶರ್ಟ್‌ಗಳನ್ನು ಧರಿಸಿದ್ದರು. ಗಲ್ಫ್‌ನಲ್ಲಿ ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಿರುವ ಹಿನ್ನೆಲೆಯಲ್ಲಿ ದೇಶದ ದೊರೆಗೆ ರಾಷ್ಟ್ರೀಯ ಫುಟ್ಬಾಲ್ ತಂಡ ಈ ಮೂಲಕ ತನ್ನ ಬೆಂಬಲ ವ್ಯಕ್ತಪಡಿಸಿತ್ತು.
ದಕ್ಷಿಣ ಕೊರಿಯ ವಿರುದ್ಧದ ಪಂದ್ಯದಲ್ಲಿ 25ನೆ ನಿಮಿಷದಲ್ಲಿ ಗೋಲು ಬಾರಿಸಿ ಕತರ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟ ಬಳಿಕ ಮಿಡ್ ಫೀಲ್ಡರ್ ಹಸನ್ ಅಲ್-ಹೈದೋಸ್ ಟೀ-ಶರ್ಟ್‌ನ್ನು ಬೀಸುತ್ತಾ ಸಂಭ್ರಮ ವ್ಯಕ್ತಪಡಿಸಿದ್ದರು.
ಫುಟ್ಬಾಲ್ ಆಟಗಾರರು ರಾಜಕೀಯ, ಧಾರ್ಮಿಕ ಅಥವಾ ವಾಣಿಜ್ಯ ಸಂದೇಶಗಳಿರುವ ಟೀ-ಶರ್ಟ್‌ನ್ನು ಧರಿಸುವುದಕ್ಕೆ ಫಿಫಾ ನಿಷೇಧ ಹೇರಿದೆ.





