ಇಂಡೋನೇಷ್ಯ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿ: ಶ್ರೀಕಾಂತ್, ಪ್ರಣಯ್ ಎರಡನೆ ಸುತ್ತಿಗೆ ಲಗ್ಗೆ

ಜಕಾರ್ತ, ಜೂ.14: ಇಂಡೋನೇಷ್ಯ ಸೂಪರ್ ಸರಣಿ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಶಟ್ಲರ್‌ಗಳಾದ ಕೆ.ಶ್ರೀಕಾಂತ್ ಹಾಗೂ ಎಚ್.ಎಸ್. ಪ್ರಣಯ್ ಎರಡನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಇಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್ ಹಾಂಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್ ವಿರುದ್ಧ 21-15, 17-21, 21-16 ಗೇಮ್‌ಗಳ ಅಂತರದಿಂದ ಮಣಿಸಿದರು. ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ಡೆನ್ಮಾರ್ಕ್‌ನ ಜಾನ್ ಜಾರ್ಜನ್ಸನ್‌ರನ್ನು ಎದುರಿಸಲಿದ್ದಾರೆ.
ವಿಶ್ವದ ನಂ.29ನೆ ಆಟಗಾರ ಪ್ರಣಯ್ ಸ್ಥಳೀಯ ಆಟಗಾರ ಅಂಥೋನಿ ಸಿನಿಸುಕಾ ಜಿಂಟಿಂಗ್ ವಿರುದ್ಧ 43 ನಿಮಿಷಗಳ ಹೋರಾಟದಲ್ಲಿ 21-13, 21-18 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಪ್ರಣಯ್ ಮುಂದಿನ ಸುತ್ತಿನಲ್ಲಿ ಮಲೇಷ್ಯಾದ ಲೀ ಚೊಂಗ್ ವೀ ಅವರನ್ನು ಎದುರಿಸಲಿದ್ದಾರೆ.
ಸಿಂಗಾಪುರ ಹಾಗೂ ಥಾಯ್ಲೆಂಡ್‌ನಲ್ಲಿ ಸತತ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಬಿ.ಸಾಯಿ ಪ್ರಣೀತ್ ಟೂರ್ನಿಯ ಆರಂಭಿಕ ಸುತ್ತಿನಲ್ಲೇ ಸೋತು ನಿರಾಸೆಗೊಳಿಸಿದರು.
ಪ್ರಣೀತ್ 40 ನಿಮಿಷಗಳ ಕಾಲ ನಡೆದಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ ಕೊರಿಯಾದ ದ್ವಿತೀಯ ಶ್ರೇಯಾಂಕದ ಸನ್ ವಾನ್ ಹೊ ವಿರುದ್ಧ 14-21, 18-21 ಅಂತರದಿಂದ ಶರಣಾಗಿದ್ದಾರೆ.
ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಅವರಿ ಫಜರ್ ಅಲ್ಫಿಯಾನ್ ಹಾಗೂ ಮುಹಮ್ಮದ್ ರಿಯಾನ್ ವಿರುದ್ಧ 9-21, 19-21 ಅಂತರದಿಂದ ಸೋತಿದ್ದಾರೆ.
ಇಂಡೋನೇಷ್ಯಾದ ಡಿಯಾನ್ ಫಿಟ್ರಿಯಾನಿ ಹಾಗೂ ನಾಡಿಯಾ ಮೆಲಾಟಿ ವಿರುದ್ಧ 21-19, 19-21, 13-21 ಅಂತರದಿಂದ ಸೋತಿರುವ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಅವರ ಮಹಿಳೆಯರ ಡಬಲ್ಸ್ ಹೋರಾಟ ಅಂತ್ಯಗೊಂಡಿದೆ.







