ಗ್ರಾಮ ಪಂಚಾಯತ್ ಬಲವರ್ಧನೆಗೆ ಸುಗ್ರಾಮ ಮಹಿಳಾ ಸಂಘಟನೆಯಿಂದ ಮನವಿ ಸಲ್ಲಿಸಲು ನಿರ್ಧಾರ
ಮಂಗಳೂರು, ಜೂ. 14: ಗ್ರಾಮ ಪಂಚಾಯತ್ ಬಲವರ್ಧನೆಗೆ ಸುಗ್ರಾಮ ಮಹಿಳಾ ಪ್ರತಿನಿಧಿಗಳ ಸಂಘಟನೆಯ ಸದಸ್ಯರು ಆಗ್ರಹಿಸಿ ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ನಗರದ ಸರಕಾರಿ ನೌಕರರ ಸಭಾಭವನದಲ್ಲಿ ಜನಶಿಕ್ಷಣ ಟ್ರಸ್ಟ್ ಮತ್ತು ಹಂಗರ್ ಪ್ರೊಜೆಕ್ಟ್‌ವತಿಯಿಂದ ಹಮ್ಮಿಕೊಂಡ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘದ ಪ್ರತಿನಿಧಿಗಳ ಸಂಘಟನೆ ‘ಸುಗ್ರಾಮ’ದ ವಿಶೇಷ ಸಮಾಲೋಚನಾ ಸಭೆಯಲ್ಲಿಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಪತ್ರ ಡಿಸೆಂಬರ್ 31, 2015ರಲ್ಲಿ ಪ್ರಕಟವಾಗಿರುವಂತೆ ಸದ್ರಿ ಅಧಿನಿಯಮ ಫೆಬ್ರವರಿ 25,2016ರಂದು ಜಾರಿಗೆ ಬರಬೇಕಿತ್ತು ಆದರೆ ಈ ಅಧಿನಿಯಮ ಇನ್ನೂ ಸಮಗ್ರವಾಗಿ ಜಾರಿಯಾಗಿರುವುದಿಲ್ಲ. ಅಧಿನಿಯಮದ ಪ್ರಕರಣ ಸಂಖ್ಯೆ 3ರಂತೆ ಜನವಸತಿ ಪ್ರದೇಶಗಳನ್ನು ಗುರುತಿಸಿ ಅಧಿ ಸೂಚಿಸಿ ಘೋಷಿಸುವ ಮೂಲಕ ವಸತಿ ಸಭೆಗಳನ್ನು ನಡೆಸಲು ಅವಕಾಶ ಕಲ್ಪಿಸಿ, ಪರಿಶಿಷ್ಟ ಜಾತಿ, ಪಂಗಡದ ಚುನಾಯಿತ ಸದಸ್ಯರು ಅಧ್ಯಕ್ಷರಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸುವುದರೊಂದಿಗೆ ಅಧಿನಿಯಮದ ಸಮಗ್ರ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈ ಗೊಳ್ಳಬೇಕೆಂದು ಸುಗ್ರಾಮ ಸಂಘದ ದ.ಕ ಹಾಗೂ ಉಡುಪಿಯ ಜಿಲ್ಲೆಯ ಪ್ರತಿನಿಧಿಗಳು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರತಿ ಗ್ರಾಮ ಪಂಚಾಯತ್‌ಗೊಂದು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿ ನಿರಂತರ ನೀರು ಪೂರೈಕೆ ಮಾಡಬೇಕು. ಅಲ್ಲದೆ ಈಗಾಗಲೇ ನಿರ್ಮಿಸಿರುವ ಘಟಕಗಳು ಶೀಘ್ರವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು. ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳೆಯರಿಗೆ ಪ್ರತಿ ಪಂಚಾಯತ್‌ನಲ್ಲಿಯೂ ಪ್ರತ್ಯೇಕ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿ ನಿರ್ಮಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಹಕ್ಕು ಪತ್ರ ದೊರೆಯದೆ ಇರುವ ಸರಕಾರಿ ಜಮೀನಿನಲ್ಲಿ ವಾಸಿಸುತ್ತಿರುವ ಆರ್ಥಿಕವಾಗಿ ಹಿಂದುಳಿದವರಿಗೆ, ಪರಿಶಿಷ್ಟ ಜಾತಿ, ಪಂಗಡದವರಿಗೆ 94 ಸಿ, 94ಸಿಸಿ ಅಡಿಯಲ್ಲಿ ಶೀಘ್ರವಾಗಿ ಹಕ್ಕುಪತ್ರ ನೀಡುವಂತೆ ಮತ್ತು ಅವರಿಗೆ ವಸತಿ, ಮಹಾತ್ಮ ಗಾಂಧಿ ನರೇಗಾದಂತಹ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ನೆರವಾಗಬೇಕು. ಪಡಿತರ ಚೀಟಿಯ ಮತ್ತು ವಿತರಣೆಯ ಸಮಸ್ಯೆಯನ್ನು ಬಗೆಹರಿಸಲು ಸರಕಾರ ತುರ್ತು ಕ್ರಮ ಕೈ ಗೊಳ್ಳಬೇಕು. ಕೆಲವು ಗ್ರಾಮ ಪಂಚಾಯತ್‌ಗಳಲ್ಲಿ ಖಾಯಂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕಗೊಳಿಸದೇ ಇರುವ ಕಾರಣ ಅಭಿವೃದ್ಧಿ ಕಾರ್ಯಗಳು ಸುಸೂತ್ರವಾಗಿ ನಡೆಯಲು ತೊಡಕಾಗಿದೆ. ಆದುದರಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು. ಬಯಲು ಶೌಚ ಮುಕ್ತ ಜಿಲ್ಲೆಯೆಂದು ಘೋಷಿಸಿದ ಬಳಿಕ ಇನ್ನೂ ಉಳಿದಿರುವ ಶೌಚಾಲಯ ಇಲ್ಲದ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲೆಯ ಸುಗ್ರಾಮ ಸಂಘದ ಅಧ್ಯಕ್ಷೆ ಪ್ರಭಾ ಬಿ.ಶೆಟ್ಟಿ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ತ್ಯಾಜ್ಯ ಮುಕ್ತ ಮತ್ತು ಸ್ವಚ್ಛ ಗ್ರಾಮಕ್ಕೆ ಸುಗ್ರಾಮದ ಮೂಲಕ ನಿರಂತರವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಪ್ಲಾಸ್ಟಿಕ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ಸುಡದೇ ಪ್ರತ್ಯೇಕವಾಗಿ ಮನೆಯಲ್ಲಿಯೇ ಸಂಗ್ರಹಿಸಿಟ್ಟು ಗ್ರಾಮ ಪಂಚಾಯತ್‌ಗೆ ಒಪ್ಪಿಸಿ,ತ್ಯಾಜ್ಯ ಮುಕ್ತ ಮನೆ ಮತ್ತು ಗ್ರಾಮ ನಿರ್ಮಾಣಕ್ಕೆ ಶ್ರಮಿಸುತ್ತಿದ್ದೇವೆ. ಮನೆ ಮನೆಗಳಲ್ಲಿ ಸಂಗ್ರಹಿಸಿಟ್ಟ ಪ್ಲಾಸ್ಟಿಕ್ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಮತ್ತು ವಿಲೇವಾರಿಗೆ ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಾಲಯವನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಪ್ಲಾಸ್ಟಿಕ್ ನಿಷೇಧ ಕಾಯಿದೆ ಕಟ್ಟು ನಿಟ್ಟಾಗಿ ಜಾರಿಗೊಳಿಸುವಂತೆ ಕ್ರಮ ಕೈ ಗೊಳ್ಳಬೇಕು ಎಂದು ಸುಗ್ರಾಮ ಸಂಘಟನೆ ರಾಜ್ಯ ಸಂಚಾಲನ ಸಮಿತಿ ಸದಸ್ಯೆ ಸುಜಾತ ಆಗ್ರಹಿಸಿದ್ದಾರೆ.
ಸಮಾರಂಭದಲ್ಲಿ ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕರಾದ ಶೀನ ಶೆಟ್ಟಿ,ಕೃಷ್ಣ ಮೂಲ್ಯ ಸುಗ್ರಾಮ ಸಂಘಟನೆಯ ಪದಾಧಿಕಾರಿಗಳಾದ ಜಯ ಪುತ್ತೂರು, ದಾಕ್ಷಾಯಿಣಿ ಬಂಟ್ವಾಳ, ಸವಿತಾ ಮಂಗಳೂರು, ಉಡುಪಿ ತಾಲೂಕು ಅಧ್ಯಕ್ಷೆ ಪ್ರಭಾ ಬಿ.ಶೆಟ್ಟಿ, ಹಾಗೂ ಸಂಯೋಜಕಿಯರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ, ಜಿ.ಪಂ ಮುಖ್ಯ ಕಾರ್ಯನಿರ್ವಹನಾಧಿಕಾರಿಗೆ ಮನವಿ:- ಸುಗ್ರಾಮ ಸಂಘಟನೆಯ ಸದಸ್ಯರು ಸಭೆಯ ಬಳಿಕ ಜಿಲ್ಲೆಯ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.







