ಮಂಗಳೂರು ಮನಪಾ ವ್ಯಾಪ್ತಿಯಲ್ಲಿ 981 ಜಾಹಿರಾತು ಫಲಕ : ರೋಶನ್ ಬೇಗ್

ಮಂಗಳೂರು, ಜೂ.15: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 981 ಜಾಹಿರಾತು ಫಲಕಗಳನ್ನು ಅಳವಡಿಸಲು ಅನುಮತಿ ನೀಡಲಾಗಿದೆ. ಅನಧಿಕೃತವಾಗಿ ಪ್ರದರ್ಶಿಸುತ್ತಿರುವ ಜಾಹಿರಾತು ಫಲಕಗಳನ್ನು ಪರಿಶೀಲನೆ ಮಾಡಿ ತೆರವುಗೊಳಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಆರ್. ರೋಶನ್ ಬೇಗ್ ಹೇಳಿದರು.
ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜರ ಪ್ರಶ್ನೆಗೆ ಅವರು ಉತ್ತರಿಸಿದರು.
20116-17ನೆ ಸಾಲಿನಲ್ಲಿ 2,97,41,844 ಕೋ.ರೂ. ವಾರ್ಷಿಕ ಆದಾಯ ಸಂಗ್ರಹವಾಗಿದೆ. ಜಾಹಿರಾತು ಫಲಕ ಅಳವಡಿಸಲು ಸಿಲಾ ಜಾಹಿರಾತು - 398, ಜ್ಯೋತಿ ಜಾಹಿರಾತು -193, ಜೀಡಿ ಜಾಹಿರಾತು - 102, ಕಲ್ಕೂರಾ ಜಾಹಿರಾತು - 162, ದೀಪಾ ಜಾಹಿರಾತು - 10. ಉಳಿದ 116 ಜಾಹಿರಾತು ಫಲಕಗಳಿಗೆ ಕರ್ನಾಟಕ ಮಹಾನಗರಪಾಲಿಕೆಗಳ ಅಧಿನಿಯಮದಡಿ ಖಾಸಗಿ ಆಸ್ತಿಗಳ ಮಾಲಕರ ಕೋರಿಕೆ ಮೇರೆಗೆ ಷರತ್ತುಬದ್ದ ಅನುಮತಿ ನೀಡಲಾಗಿರುದೆ ಎಂದರು.
ಜಾಹಿರಾತು ಫಲಕಗಳನ್ನು ನೀಡುವಾಗ ಇಲಾಖೆಯ ನಿಯಮಗಳನ್ನು ಪಾಲಿಸಲಾಗಿಲ್ಲವೆಂದು 1 ದೂರು ಸ್ವೀಕರಿಸಲಾಗಿದೆ. ಕಾವೂರು ಜಂಕ್ಷನ್‌ನಿಂದ ಏರ್‌ಪೋರ್ಟ್ ರಸ್ತೆ ಬದಿಯಲ್ಲಿ ಅನಧಿಕೃತ ಜಾಹಿರಾತು ಫಲಕಗಳಿರುವ ಬಗ್ಗೆ ದೂರು ಬಂದಿರುತ್ತದೆ. ಅದನ್ನು ತೆರವುಗೊಳಿಸಲು ನೋಟಿಸ್ ನೀಡಲಾಗಿದೆ ಎಂದು ಸಚಿವ ರೋಶನ್ ಬೇಗ್ ಹೇಳಿದರು.





