ಮಹಿಳೆಯರ ಮೇಲೆ ಪೊಲೀಸ್ ದೌರ್ಜನ್ಯ: ಎನ್.ಡಬ್ಲ್ಯೂ.ಎಫ್ ಖಂಡನೆ
ಬಂಟ್ವಾಳ, ಜೂ.15: ಕಲ್ಲಡ್ಕದಲ್ಲಿ ಇತ್ತೀಚೆಗೆ ನಡೆದ ಚೂರಿ ಇರಿತ, ಮಸೀದಿಗೆ ಕಲ್ಲೆಸೆತ ಇನ್ನಿತರ ಅಹಿತಕರ ಘಟನೆಗಳ ನಂತರ ಬಂಟ್ವಾಳ ಪೊಲೀಸರು ಕಲ್ಲಡ್ಕದ ಮಾಣಿಮಜಲು, ಕೆ.ಸಿ.ರೋಡ್ ಮೊದಲಾದ ಕಡೆ ರಾತ್ರಿ ಸಮಯ ಅಕ್ರಮವಾಗಿ ಹಲವು ಮನೆಗಳಿಗೆ ನುಗ್ಗಿ ಅಮಾಯಕ ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿರುವುದನ್ನು ನ್ಯಾಷನಲ್ ವಿಮೆನ್ಸ್ ಫ್ರಂಟ್, ದ.ಕ. ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಮಹಿಳಾ ಪೋಲಿಸರಿಲ್ಲದೆ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿರುವ ಪೊಲೀಸರ ಅಮಾನುಷ ಕೃತ್ಯ ನಾಗರಿಕ ಸಮಾಜ ಒಪ್ಪುವಂತಹದಲ್ಲ. ಈ ಕೃತ್ಯ ನಡೆಸಿದ ತಪ್ಪಿತಸ್ಥ ಪೋಲಿಸರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರವನ್ನು ಎನ್.ಡಬ್ಲ್ಯೂ. ಎಫ್ ಒತ್ತಾಯಿಸುತ್ತದೆ. ಪೊಲೀಸರ ಹಲ್ಲೆಗಳಿಂದ ಗಾಯಾಳುಗಳಾಗಿ ನಾಲ್ಕು ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದು ಅವರಿಗೆ ಪರಿಹಾರವನ್ನು, ನೀಡಬೇಕೆಂದು ಅಗ್ರಹಿಸುತ್ತದೆ. ಈ ಪ್ರಕರಣವನ್ನು ನ್ಯಾಷನಲ್ ವಿಮೆನ್ಸ್ ಫ್ರಂಟ್ ಗಂಭೀರವಾಗಿ ಪರಿಗಣಿಸಿದ್ದು ಮುಂದಿನ ಕಾನೂನು ಹೋರಾಟದ ಬಗ್ಗೆಯು ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಎನ್.ಡಬ್ಲ್ಯೂ.ಎಫ್. ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮ್ಲತ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.