ಎಸ್‌ಸಿಒ ದೇಶಗಳೊಂದಿಗೆ ಸಹಕಾರಕ್ಕೆ ಭಾರತ ಸಿದ್ಧ: ಭಾರತೀಯ ರಾಯಭಾರಿ

ಬೀಜಿಂಗ್, ಜೂ. 15: ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಯ ಸದಸ್ಯ ದೇಶಗಳ ‘ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆ’ಯನ್ನು ರಕ್ಷಿಸಲು ತೆಗೆದುಕೊಳ್ಳಲಾಗಿರುವ ಕ್ರಮಗಳ ಹಿನ್ನೆಲೆಯಲ್ಲಿ, ಸಂಪರ್ಕ ಮತ್ತು ವ್ಯಾಪಾರಕ್ಕೆ ಸಂಬಂಧಿಸಿ ಸಂಘಟನೆಯ ಸದಸ್ಯ ದೇಶಗಳೊಂದಿಗೆ ಸಹಕಾರಕ್ಕೆ ಭಾರತ ಸಿದ್ಧವಿದೆ ಎಂದು ಚೀನಾಕ್ಕೆ ಭಾರತದ ರಾಯಭಾರಿ ವಿ.ಕೆ. ಗೋಖಲೆ ಗುರುವಾರ ಹೇಳಿದ್ದಾರೆ.
‘‘ಸಂಘಟನೆಯ ವಲಯದಲ್ಲಿ ಹೆಚ್ಚಿನ ಸಂಪರ್ಕ ಮತ್ತು ತಡೆರಹಿತ ವ್ಯಾಪಾರವನ್ನು ನಾವು ಬೆಂಬಲಿಸುತ್ತೇವೆ ಹಾಗೂ ಇಂಥ ಕ್ರಮಗಳನ್ನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಸಿಕೊಂಡು ಹೋಗಬೇಕೆಂದು ನಾವು ಭಾವಿಸುತ್ತೇವೆ. ಅದೇ ವೇಳೆ, ಎಲ್ಲ ಸದಸ್ಯ ದೇಶಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕಾಗಿದೆ’’ ಎಂದು ಗೋಖಲೆ ನುಡಿದರು.
ಶಾಂಘೈ ಸಹಕಾರ ಸಂಘಟನೆಗೆ ಭಾರತ ಮತ್ತು ಪಾಕಿಸ್ತಾನಗಳ ಸೇರ್ಪಡೆಯನ್ನು ಅಂತಿಮಗೊಳಿಸಲು ಗುರುವಾರ ಬೆಳಗ್ಗೆ ಎಸ್‌ಸಿಒ ಕಾರ್ಯಾಲಯದಲ್ಲಿ ಏರ್ಪಡಿಸಲಾದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕಳೆದ ವಾರ ಕಝಕ್‌ಸ್ತಾನದ ಅಸ್ತಾನದಲ್ಲಿ ನಡೆದ ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆಯ ಶೃಂಗಸಮ್ಮೇಳನದ ಕೊನೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳನ್ನು ಗುಂಪಿಗೆ ಸೇರ್ಪಡೆಗೊಳಿಸಲಾಗಿತ್ತು.
ದಿಲ್ಲಿಯ ಕೆಂಪುಕೋಟೆ ಲಾಹೋರ್‌ನ ಶಾಲಿಮಾರ್ ಗಾರ್ಡನ್ಸ್ ಆಯಿತು!
ಬೀಜಿಂಗ್‌ನಲ್ಲಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಯ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ನಡೆದ ಒಂದು ಪ್ರಮಾದವು ಸಂಘಟಕರ ಮುಜುಗರಕ್ಕೆ ಕಾರಣವಾಯಿತು.
ಭಾರತದ ತ್ರಿವರ್ಣ ಧ್ವಜವನ್ನೊಳಗೊಂಡ ಕೆಂಪು ಕೋಟೆಯನ್ನು ಪಾಕಿಸ್ತಾನಿ ಟ್ಯಾಬ್ಲೊ ಒಂದರಲ್ಲಿ ಲಾಹೋರ್‌ನ ಶಾಲಿಮಾರ್ ಗಾರ್ಡನ್ಸ್ ಎಂಬುದಾಗಿ ತೋರಿಸಲಾಗಿತ್ತು.
ಚೀನಾದ ವಿದೇಶ ಸಚಿವ ವಾಂಗ್ ಯಿ, ಚೀನಾಕ್ಕೆ ಭಾರತದ ಪ್ರಧಾನಿ ವಿಜಯ ಗೋಖಲೆ, ಪಾಕಿಸ್ತಾನದ ರಾಯಭಾರಿ ಮಸೂದ್ ಖಾಲಿದ್ ಮತ್ತು ಶಾಂಘೈ ಸಹಕಾರ ಸಂಘಟನೆಯ ಇತರ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಭಾರತ ಮತ್ತು ಪಾಕಿಸ್ತಾನ- ಎರಡೂ ದೇಶಗಳ ರಾಜತಾಂತ್ರಿಕರು ಈ ತಪ್ಪನ್ನು ಸಂಘಟಕರ ಗಮನಕ್ಕೆ ತಂದರು.
ಈ ಘಟನೆಯ ಬಗ್ಗೆ ಕ್ಷಮೆ ಕೋರಿದ ಎಸ್‌ಸಿಒ ಅಧಿಕಾರಿಗಳು, ಇದು ಭಾರತ ಮತ್ತು ಪಾಕಿಸ್ತಾನಗಳನ್ನೊಳಗೊಂಡ ಮೊದಲ ಕಾರ್ಯಕ್ರಮವಾದುದರಿಂದ ಪ್ರದರ್ಶನದಲ್ಲಿದ್ದ ಚಿತ್ರಗಳನ್ನು ಮರುಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.







